ತಿರುಪತಿಯ ಬಳಿ ಬೆಲೆ ಬಾಳುವ ಜಮೀನು ಕೊಡಿಸುವ ನೆಪದಲ್ಲಿ ಆಂಧ್ರಪ್ರದೇಶ ಮೂಲದ ಉದ್ಯಮಿಯನ್ನು ಬೆಂಗಳೂರಿಗೆ ಕರೆಸಿ 1.9 ಕೋಟಿ ಹಣ ಪಡೆದು ವಂಚನೆ ನಡೆಸಿದ ಐವರು ಆರೋಪಿಗಳನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.
ವಂಚನೆ ಸಂಬಂಧ ಆಂಧ್ರಪ್ರದೇಶದ ಉದ್ಯಮಿ ರಾಧಾಕೃಷ್ಣ ಅವರು ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಐವರು ಆರೋಪಿಗಳನ್ನು ಬಂಧಿಸಿ 65 ಲಕ್ಷ ನಗದು, 8.50ಲಕ್ಷ ಮೌಲ್ಯದ ಚಿನ್ನ,ಬೆಳ್ಳಿ ಆಭರಣಗಳು, ಇನ್ನೋವಾ,ಹುಂಡೈ, ಅಲ್ಟೋ ಸೇರಿ ನಾಲ್ಕು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಸಂಜಯ್ ಶ್ರೀನಿವಾಸ್(30) ಮುಗಿಲೇಶ್ವರ್ (50)ಪ್ರಭಾಕರ ರೆಡ್ಡಿ(42) ರಾಜೇಶ್(40)ರವಿಕುಮಾರ್ (45) ಬಂಧಿತ ಆರೋಪಿಗಳಾಗಿದ್ದಾರೆ.
ತಿರುಪತಿಯಲ್ಲಿ 14 ಎಕರೆ ಜಮೀನು ಕೊಡಿಸುವುದಾಗಿ ಆರೋಪಿಗಳು ನಂಬಿಸಿ ಹೈಗ್ರೌಂಡ್ ನ ಪ್ರತಿಷ್ಠಿತ ಅಶೋಕ ಹೋಟೆಲ್ಗೆ ಉದ್ಯಮಿ ರಾಧಾಕೃಷ್ಣ ಅವರನ್ನು ಕರೆಸಿ ಡೀಲ್ ಕುದುರಿಸಿ,1 ಕೋಟಿ 9 ಸಾವಿರ ರೂ ಮುಂಗಡ ಪಡೆದಿದ್ದಾರೆ.
ಈ ವೇಳೆ ಹಣ ಪಡೆದು ಉದ್ಯಮಿಯ ಸ್ನೇಹಿತನ ಜೊತೆ ಜಮೀನು ತೋರಿಸುವುದಾಗಿ ಕಾರಿನಲ್ಲಿ ಕರೆದೊಯ್ದು ನಗರದ ಹೊರವಲಯದಲ್ಲಿ ಹೊಗುತಿದ್ದಂತೆ ಜ್ಯೂಸ್ ತರಲು ವಾಹನ ನಿಲ್ಲಿಸಿದ್ದರು.
ಉದ್ಯಮಿ ಸ್ನೇಹಿತನಿಗೆ ಜ್ಯೂಸ್ ತರಲು ಹೇಳಿ ಕಳುಹಿಸಿದ್ದರು. ಆತ ಕಾರ್ನಿಂದ ಇಳಿದು ಹೊದಾಗ ಹಣದ ಸಮೇತ ಕಾರ್ನಲ್ಲಿ ಪರಾರಿಯಾಗಿದ್ದರು. ಘಟನೆ ಸಂಬಂಧ ಹಣ ಕಳೆದುಕೊಂಡ ಹೈಗ್ರೌಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದು ಪೊಲೀಸ್ ಇನ್ಸ್‌ಪೆಕ್ಟರ್ ಭರತ್ ಅವರ ನೇತೃತ್ವದ ಸಿಬ್ಬಂದಿ ಮಾತುಕತೆ ನಡೆಸಿದ ಹೋಟೆಲ್‌ನ ಸಿಸಿ ಕ್ಯಾಮಾರದಲ್ಲಿ ಸೆರೆಯಾದ ದೃಶ್ಯಗಳು ಇನ್ನಿತರ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.