ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ವಿರುದ್ಧ ಇ.ಡಿಗೆ ಯಾರೂ ದೂರು ನೀಡಿಲ್ಲ. ಆದರೂ ದಾಳಿ ಮಾಡಿದ್ದಾರೆ. ದಾಳಿಯ ಅಗತ್ಯವೇ ಇರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿ, “ಬಿಜೆಪಿ ನಾಯಕ ಎನ್ ಆರ್ ರಮೇಶ್ ದೂರು ಆಧಾರದಲ್ಲಿ ದಾಳಿ ಮಾಡಲು ಆಗಲ್ಲ. ಸಿಬಿಐಗೆ ದಾಳಿ ಅಧಿಕಾರ ಇದೆ. ಈಗಾಗಲೇ ಎಸ್ ಐ ಟಿ ವಿಚಾರಣೆ ನಡೆಯುತ್ತಿದೆ. ಪಾರದರ್ಶಕ ತನಿಖೆ ನಡೆಸಲು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ” ಎಂದರು.
“ಲೋಕ ಚುನಾವಣೆಯಲ್ಲಿ ಎಲ್ಲಿ ಎಡವಿದ್ದೇವೆ ಎಂದು ತಿಳಿದುಕೊಳ್ಳಲು ಸತ್ಯಶೋಧನಾ ಸಮಿತಿ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 9 ಸ್ಥಾನ ಪಡೆದುಕೊಂಡಿದ್ದೇವೆ. ನಮಗೆ 14 ರಿಂದ 15 ಸೀಟು ನಿರೀಕ್ಷೆ ಇತ್ತು. ಎಲ್ಲಿ ಎಡವಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಸತ್ಯಶೋಧನಾ ಸಮಿತಿ ಬಂದಿದೆ” ಎಂದರು.
“ಲೋಕಸಭಾ ಚುನಾವಣಾ ಹಿನ್ನಡೆಯ ಬಗ್ಗೆ, ನಾನು ಸಿಎಂ ಪ್ರತ್ಯೇಕವಾಗಿ ಚರ್ಚೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ವಿಚಾರ ವಿನಿಮಯ ಮಾಡುತ್ತೇವೆ. ನಾವು ಉತ್ತಮ ಅಭ್ಯರ್ಥಿ ಹಾಕಿದ್ದೆವು, ಒಗ್ಗಟ್ಟಿನಿಂದ ಕೆಲಸ ಮಾಡಿದ್ದೆವು. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವರ್ಕೌಟ್ ಆಗಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕೆಂದು ಸಿದ್ದತೆ ಮಾಡುತ್ತೇವೆ” ಎಂದು ಹೇಳಿದರು.
“ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಎಲ್ಲ ರಾಜ್ಯಗಳ ಒಂದು ತಂಡ ಹೋಗಿದೆ. ಎಲ್ಲಿ ಏನು ಸಮಸ್ಯೆ ಆಗಿದೆ, ಯಾವ ರೀತಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಮಿತಿ ಕಳಿಸಿದ್ದಾರೆ. ಎಲ್ಲರೂ ಇಲ್ಲಿ ಬರಲು ಸಾಧ್ಯವಾಗದೆ ಇರುವುದರಿಂದ ನಾನೂ ನಾಲ್ಕು ಜಿಲ್ಲೆಗೆ ತಂಡ ಕಳಿಸಿದ್ದೇನೆ” ಎಂದರು.