Homeಕರ್ನಾಟಕಬಜೆಟ್​ನಲ್ಲಿ ಏನಿಲ್ಲ.. ಏನಿಲ್ಲ.. ಎನ್ನುವ ಬಿಜೆಪಿಗರ ತಲೆಯಲ್ಲೇ ಏನೂ ಇಲ್ಲ: ಸಿದ್ದರಾಮಯ್ಯ ತಿರುಗೇಟು

ಬಜೆಟ್​ನಲ್ಲಿ ಏನಿಲ್ಲ.. ಏನಿಲ್ಲ.. ಎನ್ನುವ ಬಿಜೆಪಿಗರ ತಲೆಯಲ್ಲೇ ಏನೂ ಇಲ್ಲ: ಸಿದ್ದರಾಮಯ್ಯ ತಿರುಗೇಟು

ಕೇಂದ್ರ ಸರ್ಕಾರ ಇಲ್ಲಿವರೆಗೂ 1 ರೂಪಾಯಿ ಕೊಟ್ಟಿಲ್ಲ. ನಾವು ಸುಳ್ಳು ಹೇಳಿದ್ದರೆ ರಾಜ್ಯಪಾಲರು ಓದುತ್ತಿದ್ದರಾ? ಬಜೆಟ್​ ಕೇಳುವುದಕ್ಕೆ ಆಗದೇ ವಿಲವಿಲ ಒದ್ದಾಡಿ ಬಿಜೆಪಿ ನಾಯಕರು ಎದ್ದು ಹೋದರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿ ಕರೆದು ಮಾತನಾಡಿ, “ಕಳೆದ ಬಜೆಟ್​​ಗಿಂತ 46,630 ಕೋಟಿ ರೂ. ಬಜೆಟ್​ ಗಾತ್ರ ಹೆಚ್ಚಳವಾಗಿದೆ” ಎಂದರು.

“ಬರ ಹಿನ್ನೆಲೆ ಕೇಂದ್ರದ ಬಳಿ 18,171 ಕೋಟಿ ರೂ. ಕೇಳಿದ್ದೇವೆ. ಇದುವರೆಗೂ ಕೇಂದ್ರದಿಂದ ಒಂದು ರೂಪಾಯಿ ಸಹ ಬಂದಿಲ್ಲ. ಇದುವರೆಗೂ ಒಂದು ಮೀಟಿಂಗ್​ ಕೂಡ ಮಾಡಿಲ್ಲ, ರಾಜ್ಯದಲ್ಲಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ” ಎಂದು ಕಿಡಿಕಾರಿದರು.

“ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿಯಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಬಿಟ್ಟಿ ಗ್ಯಾರಂಟಿ ಕೊಟ್ಟಿದ್ದರಿಂದ ಆರ್ಥಿಕ ದಿವಾಳಿ ಅಂತಿದ್ದಾರೆ. ಬಜೆಟ್‌ ಅನ್ನು ಪೂರ್ಣ ನೋಡದೇ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೂ ನಾವು ಅನುದಾವನ್ನು ಕೊಟ್ಟಿದ್ದೇವೆ” ಎಂದರು.

“ಮೋದಿ ಮುಂದೆ ಬಿಜೆಪಿ ನಾಯಕರು ಕೋಲೆ ಬಸವನ ತರ ಅಲ್ಲಾಡಿಸುತ್ತಾರೆ. ಅಲ್ಲಿ ಹಣಕೇಳಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರಕ್ಕೆ ಕೇಳಲ್ಲ. ಪಾರ್ಲಿಮೆಂಟ್​ನಲ್ಲಿ ಯಾವತ್ತಾದರೂ ಮಾತನಾಡಿದ್ದಾರಾ? ಇವರು ಎಂಪಿಗಳಾವುದಕ್ಕೇ ನಾಲಾಯಕ್” ಎಂದು ಕರ್ನಾಟಕ ಬಿಜೆಪಿ ಸಂಸದರನ್ನು ತರಾಟೆಗೆ ತಗೆದುಕೊಂಡರು.

ಬಜೆಟ್​ ಕೇಳಲೇಬಾರದೆಂದು ಪ್ಲ್ಯಾನ್​

“ಬಜೆಟ್​ನಲ್ಲಿ ಏನಿಲ್ಲ.. ಏನಿಲ್ಲ.. ಎಂದು ಬಿಜೆಪಿಗರು ಹೇಳುತ್ತಾರೆ. ಅವರ ತಲೆಯಲ್ಲಿ ಏನಿಲ್ಲ…. ಅವರ ತಲೆಯಲ್ಲಿ ಮಂಜು ತುಂಬಿದೆ. ಕಾಮಾಲೆ ರೋಗದವರಿಗೆ ಕಾಣುವುದೆಲ್ಲ ಹಳದಿ ಅಂತೆ. ರಾಜಕೀಯ ಮಾಡಲಿ ಬೇಡ ಅನ್ನಲ್ಲ. ಟೀಕೆ, ಆರೋಪಗಳು ಆರೋಗ್ಯಕರವಾಗಿರಬೇಕು. ಬಿಜೆಪಿ ನಾಯಕರು ಏನಿಲ್ಲ.. ಏನಿಲ್ಲ.. ಎಂದು ಶುರುಮಾಡಿದರು. ಅವರ ನಡವಳಿಕೆ ನೋಡಿದರೆ ಬಜೆಟ್​ ಕೇಳಬಾರದೆಂದು ಮೊದಲೇ ಪ್ಲ್ಯಾನ್​ ಮಾಡಿಕೊಂಡು ಬಂದಿದ್ದರು” ಎಂದು ಸಿದ್ದರಾಮಯ್ಯ ಟೀಕಿಸಿದರು.

“ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಾವು ಅಧಿಕಾರಕ್ಕೆ ಬಂದು ಇನ್ನೂ 9 ತಿಂಗಳು ಕೂಡ ಆಗಿಲ್ಲ. ನಾವು ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಕೃಷಿ, ಗ್ರಾಮೀಣಾಭಿವೃದ್ಧಿ, ಇಂಧನ ಕ್ಷೇತ್ರಕ್ಕೆ ಹಣ ಒದಗಿಸಿದ್ದೇವೆ. ಬಜೆಟ್​​ನಲ್ಲಿ ಎಲ್ಲಾ ಸಮುದಾಯಗಳಿಗೂ ಶಕ್ತಿ ತುಂಬಲಾಗಿದೆ” ಎಂದರು.

“ವಸ್ತುಸ್ಥಿತಿ ಹೇಳಿದರೆ ಬಿಜೆಪಿಯವರಿಗೆ ನುಂಗಲಾರದ ತುತ್ತು. ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಹೊದ್ದರು ಅಂತ ನಮ್ಮ ಹಳ್ಳಿಕಡೆ ಗಾದೆ ಹೇಳುತ್ತಾರೆ. ಸತ್ಯ ಹೇಳಿದರೆ ತಡೆದುಕೊಳ್ಳುವುದಕ್ಕೆ ಇವರಿಗೆ ಆಗುವುದಿಲ್ಲ. ಕರ್ನಾಟಕಕ್ಕೆ ಆದ ಅನ್ಯಾಯ ಹೇಳುವುದು ನನ್ನ ಜವಾಬ್ದಾರಿ, ಕರ್ತವ್ಯ. ಹೇಳಿದ್ದೇನೆ” ಎಂದು ಹೇಳಿದರು.

“ಭದ್ರಾ ಮೇಲ್ದಂಡೆ ಯೋಜನೆಗೆ ಏನು ಕೊಟ್ಟಿಲ್ಲ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ನಾನು ಹೇಳಿದ್ನಾ? 5,300 ಕೋಟಿ ಘೋಷಣೆ ಮಾಡಿದ್ದು ಯಾರು? ಅವರೇ ಹೇಳಿದ್ದರು. ಆದರೆ, ಇವತ್ತಿನವರೆಗೂ ಏನೂ ಕೊಟ್ಟಿಲ್ಲ. ಬೊಮ್ಮಾಯಿ ಬಜೆಟ್​​ ಭಾಷಣ ಬೇಕಾದರೆ ತೆಗೆದು ನೋಡಿ. ಬಿಜೆಪಿ ನಾಯಕರು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ” ಎಂದು ಹರಿಹಾಯ್ದರು.

ಮೋದಿ ನಮ್ಮ ಗ್ಯಾರಂಟಿ ಕದ್ದಿದ್ದಾರೆ

“ಬಡವರಿಗೆಲ್ಲ ಬಿಜೆಪಿ ಅವಮಾನ ಮಾಡುತ್ತಿದೆ. ಗ್ಯಾರಂಟಿ ಅನ್ನೋ ಪದವನ್ನೇ ಬಿಜೆಪಿ‌ ಕದ್ದಿದೆ. ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತಾರೆ. ನಮ್ಮನ್ನು ನಕಲು ಮಾಡಿದ್ದಾರೆ. ಈಗ ನಮ್ಮನ್ನೇ ಬಿಟ್ಟಿ ಗ್ಯಾರಂಟಿ ಅಂತ ಕರೆಯುತ್ತಿದ್ದಾರೆ. ಇವರ ಮೋದಿ‌ ಗ್ಯಾರಂಟಿಗೆ ಏನು ಹೇಳಬೇಕು?” ಎಂದು ಲೇವಡಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments