ಬೆಂಗಳೂರು: ವರ್ಷಾನುಗಟ್ಟಲೆಯಿಂದ ಅವಕಾಶ ಕೊಡದೇ ಈಗ ಕೊನೆ ಕ್ಷಣದಲ್ಲಿ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ (ಡಿ.19) ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಅಂದು ಬೆಳಿಗ್ಗೆ 11.30ಕ್ಕೆ ಭೇಟಿಗೆ ಪ್ರಧಾನಿ ಸಚಿವಾಲಯದಿಂದ ಸಮಯ ನಿಗದಿಯಾಗಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
“ರಾಜ್ಯದ ಸಮಸ್ಯೆಗಳು, ರಾಜ್ಯದ ಅನುದಾನದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋದಾಗ ಸಮಯ ಕೇಳಿದಾಗ ಕೊಟ್ಟಿರಲಿಲ್ಲ. ಈಗ ಕೊನೆ ಕ್ಷಣದಲ್ಲಿ ಅವಕಾಶ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ದಿನ ಬಿಟ್ಟು ಅವಕಾಶ ಕೊಟ್ಟಿದ್ದರೆ ಕೋಡ್ ಆಫ್ ಕಂಡಕ್ಟ್ ಬಂದು ಬಿಡುತ್ತಿತ್ತು” ಎಂದರು.
“ವಿರೋಧ ಪಕ್ಷದ ಮುಖ್ಯಮಂತ್ರಿಗಳಿರಬಹುದು ಅಥವಾ ಸ್ವಪಕ್ಷದ ಮುಖ್ಯಮಂತ್ರಿಗಳಿರಬಹುದು, ಈ ರೀತಿ ಕಡೆಗಣಿಸಿರುವ ಇತಿಹಾಸ ಇರಲಿಲ್ಲ. ಹಿಂದೆ ವಾಜಪೇಯಿ, ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಯಾರೂ ಈ ರೀತಿಯಾಗಿ ಮುಖ್ಯಮಂತ್ರಿಗಳನ್ನು ನಡೆಸಿಕೊಂಡಿರಲಿಲ್ಲ. ಈ ಪ್ರಧಾನಿಗಳು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಕಡೆಗಣಿಸುತ್ತಿದ್ದಾರೆ. ಆ ರಾಜ್ಯಗಳು ಅಭಿವೃದ್ಧಿ ಹೊಂದಬಾರದು, ಅನುದಾನ ಸಿಗಬಾರದು ಎಂಬ ಮನಸ್ಥಿತಿ ಇದ್ದಂತೆ ಕಾಣುತ್ತಿದೆ” ಎಂದು ವಾಗ್ದಾಳಿ ನಡೆಸಿದರು.