ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರೇನು ನನ್ನ ವೈರಿಯಲ್ಲ. ನಾವಿಬ್ಬರೂ ಆತ್ಮೀಯ ಸ್ನೇಹಿತರೇ. ಹಿರಿಯೂರು ಉಪ ಚುನಾವಣೆ ಬಗ್ಗೆ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಇನ್ನು ನಾವು ರಾಜ್ಯ ನಾಯಕರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ತಮ್ಮ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ಇಲ್ಲಿ ಸಾರ್ವಜನಿಕವಾಗಿ ಚರ್ಚೆ ಮಾಡುವುದಕ್ಕೆ ಏನಿದೆ? ನಾಲ್ಕು ಗೋಡೆಗಳ ನಡುವೆ ಕೂತು ಚರ್ಚೆ ನಡೆಸಿ ತೀರ್ಮಾನ ಮಾಡೋಣ ಎಂದ ಅವರು; ಇಲ್ಲಿ ನನ್ನ ವೈಯಕ್ತಿಕ ಪ್ರತಿಷ್ಠೆ ಪ್ರಶ್ನೆ ಬರುವುದಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಎನ್ ಡಿ ಎ ಅಭ್ಯರ್ಥಿಗಳು ಗೆಲುವು ಸಾಧಿಸಿದಂತೆ ಹಿರಿಯೂರು ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬ ಅಪೇಕ್ಷೆ ನನ್ನದು. ಅದನ್ನೇ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ. ಕ್ಷೇತ್ರದ ಗ್ರೌಂಡ್ ರಿಪೋರ್ಟನ್ನು ಗೃಹ ಸಚಿವರಿಗೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟ ಗಟ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಗೆ ಟಿಕೆಟ್ ಬೇಕು ಎನ್ನುವ ಪ್ರತಿಷ್ಠೆಯೇನು ನನಗಿಲ್ಲ. ನನಗೇನು ಆತುರವೂ ಇಲ್ಲ ಸಚಿವರು ಪ್ರಶ್ನೆ ಒಂದಕ್ಕೆ ಉತ್ತರ ನೀಡಿದರು.
ಬಿಡದಿ ಟೌನ್ಶಿಪ್, ನೈಸ್, ಕೆಪಿಎಸ್ಸಿ ಹಾಗೂ ಸ್ಟಿಂಗ್ ಆಪರೇಷನ್ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ಮಾಡಿದವನು ನಾನೇ. ಅತ್ಯಂತ ಕಟುವಾಗಿ ಸರ್ಕಾರವನ್ನು ಟೀಕಿಸಿದ್ದೇನೆ. ಅದಕ್ಕೆ ಪ್ರತಿಫಲವಾಗಿ ಅತ್ಯಂತ ಕೆಟ್ಟದಾಗಿ ಬೈಸಿಕೊಂಡವನು ಕೂಡ ನಾನೇ. ಈ ಎಲ್ಲಾ ಮಾಹಿತಿಯೂ ಶಾ ಅವರಿಗೆ ಇದೆ ಎಂದರು ಸಚಿವರು.
ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಮಂತ್ರಿ ಪರಿಷತ್ ಸಭೆ ಸಂದರ್ಭದಲ್ಲಿ ಅಮಿತ್ ಶಾ ಅವರು ರಾಜ್ಯದ ಬೆಳವಣಿಗೆಗಳ ಕುರಿತು ನನ್ನೊಂದಿಗೆ ಸಂಕ್ಷಿಪ್ತವಾಗಿ ಚರ್ಚಿಸಿ, ಮರುದಿನ ಭೇಟಿಯಾಗುವಂತೆ ತಿಳಿಸಿದ್ದರು. ಅದರಂತೆ ನಾನು ಗುರುವಾರ ಸಂಜೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಹಿರಿಯೂರು ಚುನಾವಣೆ ಸೇರಿದಂತೆ ರಾಜ್ಯದ ಎಲ್ಲಾ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ನನಗೆ ಅವರು ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಅದರಂತೆಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಹಾಗೂ ರಾಜ್ಯ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸುತ್ತೇನೆ. ನಮ್ಮ ಪಕ್ಷವೇ ನಿಲ್ಲಬೇಕು ಎನ್ನುವುದಕ್ಕಿಂತ ನಮ್ಮ ಮೈತ್ರಿಕೂಟ ಚುನಾವಣೆ ಗೆಲ್ಲಬೇಕು. ಹಿರಿಯೂರಿನಲ್ಲಿ ಕಾಂಗ್ರೆಸ್ ಪಕ್ಷ ಒಂದೊಂದು ಜಾತಿಗೆ ಒಬ್ಬೊಬ್ಬರು ಮಂತ್ರಿಯನ್ನು ನೇಮಕ ಮಾಡಿದೆ. ಅಧಿಕಾರ, ಹಣಬಲದಿಂದ ಚುನಾವಣೆ ನಡೆಸಲು ಹೊರಟಿದ್ದಾರೆ. ಹೀಗಾಗಿ ನಾವು ಒಗ್ಗಟ್ಟಿನಿಂದ ಎದುರಿಸದಿದ್ದರೆ ಅವರು ಅಡ್ಡಮಾರ್ಗದಲ್ಲಿ ಗೆಲ್ಲುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇವೆಲ್ಲಾ ಅಂಶಗಳ ಬಗ್ಗೆ ನಾನು ಅಮಿತ್ ಶಾ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದೀನಿ. ಅದಕ್ಕೆ ನಾನು ಇಲ್ಲಿ ನನಗೆ ಯಾವುದೇ ರೀತಿ ಪ್ರತಿಷ್ಠೆ ಇಲ್ಲ ಅಂತ ಹೇಳಿದ್ದು. ಕ್ಷೇತ್ರದಲ್ಲಿ ನೈಜ ಪರಿಸ್ಥಿತಿ ಏನಿದೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದ ಬಿಜೆಪಿ ನಾಯಕರಿಗೂ ಇದನ್ನೇ ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಭಾರತ್ ಜೋಡೋ ಸಂಘಗಳಿಗೆ ₹1000 ಕೊಡಲು ಹಣವಿದೆ, ಆಶಾ ಕಾರ್ಯಕರ್ತೆಯರಿಗೆ ಕೊಡಲು ಹಣವಿಲ್ಲವೇ?
ಭಾರತ್ ಜೋಡೋ ಸಂಘಗಳಿಗೆ ಸಾವಿರ ಕೋಟಿ ಕೊಡುವುದಕ್ಕೆ ಹಣವಿದೆ. ಆದರೆ ನಿರಂತರವಾಗಿ ಜನರ ಆರೋಗ್ಯ ರಕ್ಷಣೆ ಮಾಡುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಈ ಸರಕಾರದಲ್ಲಿ ಹಣವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದರು.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು; ಅನಗತ್ಯವಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವ ಈ ಸರಕಾರಕ್ಕೆ, ಚಳಿಯನ್ನು ಲೆಕ್ಕಿಸದೆ ಮಕ್ಕಳನ್ನು ಹಾಕಿಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಕಣ್ಣಿಗೆ ಕಾಣುತ್ತಿಲ್ಲ. ಅವರಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವುದೇ ಅವರಿಗೆ ದೊಡ್ಡ ಕೆಲಸವಾಗಿದೆ. ಅದಕ್ಕೆ ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಹೆಣ್ಣುಮಕ್ಕಳ ಬೇಡಿಕೆಗಳನ್ನು ಸರಕಾರ ಈಡೇರಿಸಲೇಬೇಕು.ಅವರ ಗೌರವಧನ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಆ ಹೆಣ್ಣುಮಕ್ಕಳು ರಸ್ತೆಯಲ್ಲಿ ಮಲಗಿದ್ದಾರೆ. ಇದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆ ಹೆಣ್ಣುಮಕ್ಕಳಿಗೆ ಸರ್ಕಾರ ಸ್ಪಂದಿಸಬೇಕು. ಅವರಿಗೆ ಬೇಕಾದ ಎಕ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಸಚಿವರು ಒತ್ತಾಯ ಮಾಡಿದರು.
ಕೆಲವು ತಿಂಗಳ ಹಿಂದೆ ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸಿದ ಸಂದರ್ಭದಲ್ಲಿ ನಾನು ಅವರೆಲ್ಲರನ್ನು ದೆಹಲಿಗೆ ಕರೆಸಿಕೊಂಡು ಅಂದಿನ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರನ್ನು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರನ್ನು ಭೇಟಿ ಮಾಡಿಸಿ ಸಭೆ ಮಾಡಿಸಿದ್ದೆ. ಆ ಸಭೆಗಳಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ. ಪ್ರಹ್ಲಾದ್ ಜೋಶಿ ಅವರು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರು. ಆ ಹೆಣ್ಣು ಮಕ್ಕಳ ಸಮಸ್ಯೆಗಳ ಬಗ್ಗೆ ನನಗೂ ಗೊತ್ತಿದೆ ಎಂದು ಸಚಿವರು ಹೇಳಿದರು.


