ಇವತ್ತು ನನ್ನ ಜನ್ಮದಿನ, ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆಯುವೆ. ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿ, ನನ್ನ ನಿರ್ಣಯವನ್ನು ನಾಳೆ ಸುದ್ದಿಗೋಷ್ಠಿ ಮಾಡಿ ತಿಳಿಸುವೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಹೇಳಿದರು.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ತಪ್ಪಿದೆ. ಪಕ್ಷದ ಈ ನಿರ್ಧಾರದಿಂದ ಅವರು ಬೇಸರಗೊಂಡಿದ್ದಾರೆ. ಈ ವಿಚಾರವಾರಿ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಕಾಂಗ್ರೆಸ್ ಮುಖಂಡರು ನಿಮ್ಮನ್ನು ಸಂಪರ್ಕಿಸುತ್ತಿರುವುದು ನಿಜವೇ ಎಂದು ಪ್ರಶ್ನಿಸಿದಾಗ, “ವಿವಿಧ ರಾಜಕೀಯ ಪಕ್ಷಗಳ ನಾಯಕರು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಬೇರೆ ಬೇರೆ ಸಂಗತಿಗಳು ನಡೀತಿವೆ” ಎಂದಷ್ಟೇ ಹೇಳಿದರು.
“ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಾಂತ್ವನ ಮಾಡಿರುವುದು ನಿಜ. ದೆಹಲಿಯಲ್ಲಿ, ರಾಜ್ಯದಲ್ಲಿ ಒಂದಷ್ಟು ವಿದ್ಯಮಾನ ನಡೆದಿವೆ. ನಿಮಗೆ ಟಿಕೆಟ್ ಅಂದರು, ಕೊನೆ ಕ್ಷಣದಲ್ಲಿ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರವನ್ನ ಹೇಳಿಕೊಳ್ಳಬೇಕಿದೆ” ಎಂದರು.
ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಈಶ್ವರಪ್ಪ ನಿರ್ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿ, “ಈಶ್ವರಪ್ಪ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಪಕ್ಷದಲ್ಲಿ ಯಾರಿಗೆಲ್ಲಾ ಮನಸ್ಸಿಗೆ ನೋವಾಗಿದೆಯೋ, ಒಟ್ಟಿಗೆ ಹೋಗಿ ವರಿಷ್ಠರ ಭೇಟಿಯಾಗಿ ತೀರ್ಮಾನಿಸೋಣ ಅಂದಿದ್ದೆ. ಆದರೆ ಈಶ್ವರಪ್ಪ ತಮ್ಮದೇ ಆದ ನಿರ್ಣಯ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ” ಎಂದು ತಿಳಿಸಿದರು.