ಕೋಟ್ಯಂತರ ರೂ.ಗಳ ಅಕ್ರಮ ವ್ಯವಹಾರ ನಡೆದು ರದ್ದಾಗಿದ್ದ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ) ಹುದ್ದೆಗಳ ಮರುಪರೀಕ್ಷೆಯು ಮಂಗಳವಾರ ಬೆಂಗಳೂರು ನಗರದಲ್ಲಿ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೇ ಶಾಂತಿಯುತವಾಗಿ ನಡೆಸಲಾಗಿದೆ.
ಬೆಂಗಳೂರಿನ ವಿವಿದೆಢೆಗಳ 117 ಕೇಂದ್ರಗಳಲ್ಲಿ ಪರೀಕ್ಷೆಯು ಅಭೂತಪೂರ್ವ ಪೊಲೀಸ್ ಬಂದೋಬಸ್ಥ್ ನಡುವೆ, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ನಡೆಯಿತು.
ಪರೀಕ್ಷೆಗೆ ಸುಮಾರು 54 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದು ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದ ಕೊಡಬಾರದೆಂಬ ಕಾರಣಕ್ಕೆ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಪ್ರತೀ ಪರೀಕ್ಷಾ ಕೇಂದ್ರದಲ್ಲೂ ನಾಲ್ವರು ಸಶಸ್ತ್ರ ಪೇದೆಗಳು ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ 6 ಮಂದಿಯನ್ನು ನಿಯೋಜಿಸಲಾಗಿದೆ. 40 ಬೆಟಾಲಿಯನ್ ಪೊಲೀಸರನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.
545 ಮಂದಿ ಪಿಎಸ್ ಐ ಹುದ್ದೆಗಳಿಗಾಗಿ ಮರು ಪರೀಕ್ಷೆ ನಡೆದ ಪರೀಕ್ಷಾ ಕೇಂದ್ರಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುವವರು, ಗಾಳಿಸುದ್ದಿ ಹಬ್ಬಿಸುವ ಕಿಡಿಗೇಡಿಗಳು ಮತ್ತು ಜೆರಾಕ್ಸ್ ಅಂಗಡಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು.
ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನೂ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಯಿತು,ಅಭ್ಯರ್ಥಿಗಳು ವಸ್ತ್ರ ಸಂಹಿತೆಯಲ್ಲಿನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ ಮಾಡಿ ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ನಿಷೇಧಿಸಲಾಗಿತ್ತು.
ಅದರಿಂದಾಗಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಶರ್ಟ್ ಅಥವಾ ಪ್ಯಾಂಟ್‌ಗಳಿಗೆ ಜಿಪ್ ಪ್ಯಾಕೆಟ್‌ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್ಟ್ರಾ ಡಿಸೈನ್ ಇರುವಂತಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಹಾಲ್‌ಗೆ ಶೂ ಹಾಕಿಕೊಂಡು ಹೋಗುವಂತಿಲ್ಲ. ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚಿಸಲಾಗಿತ್ತು.
ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧಿಸಿ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್ ಇರುವಂತಿಲ್ಲ. ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರ ಹಾಲ್‌ಗೆ ತರದಂತೆ ನೋಡಿಕೊಳ್ಳಲಾಗಿತ್ತು.
ಯಾವುದೇ ರೀತಿಯಾದ ಅಹಾರ, ನೀರಿನ ಬಾಟಲಿಗೆ ಅವಕಾಶ ಇಲ್ಲ. ಬದಲಿಗೆ ಪರೀಕ್ಷಾ ಕೇಂದ್ರದಲ್ಲಿಯೇ ನೀರು ಕುಡಿಯಲು ವ್ಯವಸ್ಥೆ ಇದೆ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್‌ಗಳು ಪರೀಕ್ಷಾ ಕೇಂದ್ರಕ್ಕೆ ನಿಷೇಧ. ಹ್ಯಾಟ್, ಮಾಸ್ಕ್ ಧರಿಸದಂತೆ ಸೂಚನೆ ನೀಡಲಾಗಿತ್ತು.
ಪ್ರವೇಶ ಪತ್ರ, ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯ. ಕೊನೆಯ ಬೆಲ್ ಹೊಡೆಯೋವರೆಗೂ ಪರೀಕ್ಷಾ ಹಾಲ್ನಿಂದ ಅಭ್ಯರ್ಥಿಗಳು ಹೊರ ಹೋಗದಂತೆ ನಿಗಾ ವಹಿಸಲಾಗಿತ್ತು. ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗ ಸೂಚಿ ನೀಡಿ ದೊಡ್ಡ ದೊಡ್ಡ ಡಿಸೈನ್, ಬಟನ್, ಹೂಗಳು ಇರುವ ಬಟ್ಟೆ ಧರಿಸುವಂತಿಲ್ಲ. ಪೂರ್ಣ ತೋಳಿನ ಬಟ್ಟೆ ಬಳಸದಂತೆ, ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆ, ಟಾಪ್ ಬಳಸಲು ಸೂಚನೆ ನೀಡಿ ಅದರಂತೆ ಕ್ರಮ ಕೈಗೊಳ್ಳಲಾಗಿತ್ತು.
ಹೈ ಹೀಲ್ಸ್ ಚಪ್ಪಲಿ-ಶೂ ನಿಷೇಧ ಹೇರಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೂ ಯಾವುದೇ ರೀತಿಯ ಲೋಹ, ಚೈನ್ ಬಳಸದಂತೆ ಸೂಚನೆ ಕೊಡಲಾಗಿದ್ದು, ಮಂಗಳ ಸೂತ್ರ, ಕಾಲುಂಗುರ ಮಾತ್ರ ಬಳಸಲು ಅನುಮತಿ ನೀಡಲಾಗಿತ್ತು.