Homeಕರ್ನಾಟಕರಾಜೀವ್‌ ಗಾಂಧಿ, ದೇವರಾಜ ಅರಸು ಅವರ ಆದರ್ಶಗಳನ್ನು ಯುವಜನತೆಗೆ ಹೆಚ್ಚೆಚ್ಚು ಪರಿಚಯಿಸಬೇಕು: ಸಿದ್ದರಾಮಯ್ಯ

ರಾಜೀವ್‌ ಗಾಂಧಿ, ದೇವರಾಜ ಅರಸು ಅವರ ಆದರ್ಶಗಳನ್ನು ಯುವಜನತೆಗೆ ಹೆಚ್ಚೆಚ್ಚು ಪರಿಚಯಿಸಬೇಕು: ಸಿದ್ದರಾಮಯ್ಯ

ಮುತ್ಸದ್ದಿ ನಾಯಕರಾದ ರಾಜೀವ್‌ ಗಾಂಧಿ ಮತ್ತು ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಮತ್ತು ಸಮಸಮಾಜ ನಿರ್ಮಾಣಕ್ಕೆ ನೀಡಿದ ಮಹತ್ವದ ಕೊಡುಗೆಗಳು ಸ್ಮರಣೀಯ. ಇಬ್ಬರು ಮಹಾನ್‌ ನಾಯಕರ ಜನ್ಮದಿನ ಒಂದೇ ಎಂಬುದು ವಿಶೇಷ. ಅವರ ಆದರ್ಶಗಳನ್ನು ಯುವಜನತೆಗೆ ಹೆಚ್ಚೆಚ್ಚು ಪರಿಚಯಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾದ ರಾಜೀವ್‌ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ದೇಶದಲ್ಲೇ ಅತ್ಯಂತ ಸಣ್ಣ ವಯಸ್ಸಿಗೆ ರಾಜೀವ್‌ ಗಾಂಧಿ ಅವರು ಪ್ರಧಾನಿಯಾದರು. ಅವರು ಈಗ ಬದುಕಿದ್ದರೆ 82 ವರ್ಷವಾಗಿರುತ್ತಿತ್ತು. ಆದರೆ ದುಷ್ಕರ್ಮಿಗಳ ದಾಳಿಗೆ ಅವರು ಬಲಿಯಾದರು. ಅವರು ಬದುಕಿದ್ದಿದ್ದರೆ ಇನ್ನೊಮ್ಮೆ ಪ್ರಧಾನಿಯಾಗುತ್ತಿದ್ದರು, ಆಗ ಈ ದೇಶದ ಅಭ್ಯುದಯ ಸಾಧ್ಯವಾಗುತ್ತಿತ್ತು ಎಂದರು.

ರಾಜೀವ್‌ ಗಾಂಧಿ ಅವರು ಹತ್ಯೆಯಾದ ಸಂದರ್ಭ ನಾನು ಕೊಪ್ಪಳದಿಂದ ಲೋಕಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆಗ ಚುನಾವಣೆಯನ್ನು ಮುಂದೂಡಲಾಯಿತು. ಅದರ ಪರಿಣಾಮ ನಾನು ಸೋಲಬೇಕಾಯಿತು. ಹಾಗಾಗಿ ರಾಜ್ಯ ರಾಜಕಾರಣದಲ್ಲೇ ನೆಲೆಯೂರುವಂತಾಯಿತು. ಒಂದು ವೇಳೆ ರಾಜೀವ್‌ ಗಾಂಧಿ ಅವರ ಹತ್ಯೆ ಆಗದೆ ಇದ್ದಿದ್ದರೆ ನಾನು ಗೆದ್ದು, ಲೋಕಸಭಾ ಸದಸ್ಯನಾಗುತ್ತಿದ್ದೆ. ನನ್ನ ರಾಜಕೀಯ ನಡೆ ಬೇರೆಯಾಗಿರುತ್ತಿತ್ತು. ಬಹುಶಃ ನಾನು ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ಅಂದಿನ ಘಟನೆಯನ್ನು ಸ್ಮರಿಸಿದರು.

ರಾಜೀವ್‌ ಗಾಂಧಿ ಅವರು ಯುವಜನತೆ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು. ಅವರನ್ನು ಭವಿಷ್ಯದ ಪ್ರಜೆಗಳು ಎನ್ನುತ್ತಿದ್ದರು. ಬಲಿಷ್ಠ ರಾಷ್ಟ್ರ ಕಟ್ಟುವ ಕನಸು ಕಂಡಿದ್ದರು. ಅದಕ್ಕಾಗಿಯೇ ಯುವ ಜನತೆಗೆ 18 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಿದರು. 21ನೇ ಶತಮಾನದ ಕನಸನ್ನು ಕಂಡಿದ್ದರು. ಆ ದಿಕ್ಕಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದರು. ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೂರಸಂಪರ್ಕ ವಿಭಾಗದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಇಂದು ನಮ್ಮ ದೇಶದ ಯಾವುದೇ ಮೂಲೆಯಿಂದ ಜಗತ್ತಿನ ಅನೇಕ ಭಾಗಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದರೆ ಅದಕ್ಕೆ ರಾಜೀವ್‌ ಗಾಂಧಿ ಕಾರಣ ಎಂದರು.

ಆಡಳಿತದಲ್ಲಿ ಎಲ್ಲರಿಗೂ ಅಧಿಕಾರ ಮತ್ತು ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಹಿಂದುಳಿದ ವರ್ಗದ ಜನರಿಗೆ, ಮಹಿಳೆಯರಿಗೆ, ಯುವಕರಿಗೆ, ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರಿಗೆ ಸಂವಿಧಾನದ 73, 74ನೇ ತಿದ್ದುಪಡಿ ಮಾಡುವ ಮೂಲಕ ಮೀಸಲಾತಿ ಕೊಟ್ಟಿದ್ದು ರಾಜೀವ್‌ ಗಾಂಧಿ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಮಹಿಳೆಯರಿಗೆ 33% ಮೀಸಲಾತಿ ಕೊಡುವ ಮೂಲಕ ಮಹಿಳೆಯರನ್ನು ಸಮಾಜದ ಮುನ್ನೆಲೆಗೆ ತರುವ ಪ್ರಯತ್ನ ನಡೆಸಿದ್ದರು. ಇಂದು 50% ಮೀಸಲಾತಿ ಸಿಕ್ಕಿದ್ದರೆ ಅದಕ್ಕೆ ರಾಜೀವ್‌ ಗಾಂಧಿ ಕಾರಣ ಎಂದರು.

ದೇವರಾಜ ಅರಸು ಅವರು ನಮ್ಮ ಮೈಸೂರಿನ ಕಲ್ಲಹಳ್ಳಿಯವರು. ನಾಲ್ವಡಿ ಕೃಷ್ಣರಾಜ ಒಡೆಯರ್‌, ದೇವರಾಜ ಅರಸು ಮತ್ತು ನಾನು ಮೂವರು ಮೈಸೂರಿನವರು ಎಂಬುದು ವಿಶೇಷ. ನಾವೆಲ್ಲರೂ ಸಾಮಾಜಿಕ ನ್ಯಾಯಕ್ಕೆ ಮಿಡಿದಿದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮಿಲ್ಲರ್‌ ಆಯೋಗವನ್ನು ರಚಿಸಿ, ವರದಿಯನ್ನು ತರಿಸಿ ಜಾರಿ ಮಾಡುವ ಮೂಲಕ ಮಹಿಳೆಯರಿಗೆ, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನ ನಡೆಸಿದ್ದರು. 1972ರಲ್ಲಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಹಾವನೂರು ಆಯೋಗವನ್ನು ರಚನೆ ಮಾಡಿ, ವರದಿಯನ್ನು ಸ್ವೀಕರಿಸಿ, ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟರು ಎಂದು ಸಿದ್ದರಾಮಯ್ಯ ಅವರು ಹೇಳಿದರು.

8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅಂದಿನ ಕಾಲಘಟ್ಟದಲ್ಲಿ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಏಕೈಕ ಧೀಮಂತ ನಾಯಕ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ಇಟ್ಟವರು. ಭೂಸುಧಾರಣೆ ಕಾಯ್ದೆ, ಮಲ ಹೊರುವ ಪದ್ಧತಿ ನಿಷೇಧ, ಸಾಲ ವಿಮೋಚನೆ ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ವಿಧಾನಸೌಧದ ಮೆಟ್ಟಿಲು ಹತ್ತುವಂತೆ ಮಾಡಿದರು ಎಂದು ಸ್ಮರಿಸಿದರು.

ದೇಶದ ಸಂವಿಧಾನಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ, ಸಮಸಮಾಜ ನಿರ್ಮಾಣಕ್ಕಾಗಿ, ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕನ್ನು ಕಲ್ಪಿಸುವುದಕ್ಕಾಗಿ ದುಡಿದ ಧೀಮಂತ ನಾಯಕರಾದ ರಾಜೀವ್‌ ಗಾಂಧಿ ಮತ್ತು ದೇವರಾಜ ಅರಸು ಅವರ ಬಗ್ಗೆ ಇಂದಿನ ಯುವಜನತೆಗೆ ಹೆಚ್ಚೆಚ್ಚು ತಿಳಿಸಬೇಕು. ಈ ಕೆಲಸವನ್ನು ಖುದ್ದಾಗಿ ಕಾಂಗ್ರೆಸ್‌ ಪಕ್ಷ ಮತ್ತು ಕಾರ್ಯಕರ್ತರು ಮಾಡಬೇಕು. ಏಕೆಂದರೆ ಬಿಜೆಪಿಗರು ಈ ಕೆಲಸವನ್ನು ಮಾಡುವುದಿಲ್ಲ. ಕಾರಣ, ಅವರು ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments