ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲವಾಗಿದ್ದು, ಕಾಂಗ್ರೆಸ್ ನೀಡಿರುವ ಜಾಹೀರಾತಿನ ಚೊಂಬಿನಲ್ಲಿ ಹಿಂದೂಗಳ ರಕ್ತ ತುಂಬಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ತುಮಕೂರು ನಗರದಲ್ಲಿ ಸೋಮವಾರ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, “ಮುಸ್ಲಿಂ ಯುವಕರಿಗೆ ತರಬೇತಿ ಕೊಟ್ಟು ಹಿಂದೂ ಯುವತಿಯರನ್ನು ಪ್ರೀತಿಸುವ ನಾಟಕವಾಡಿ, ಲವ್ ಜಿಹಾದ್ ನಡೆಸುವಂತೆ ಹೇಳಿಕೊಡಲಾಗುತ್ತಿದೆ” ಎಂದು ಆರೋಪಿಸಿದರು.
“ರಾಜ್ಯದಲ್ಲಿ ತಾಲೀಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಜಾಹೀರಾತಿನ ಚೊಂಬಿನ ಪೂರ್ತಿ ರಕ್ತ ತುಂಬಿದೆ. ಚೊಂಬಿನಿಂದ ಹಿಂದೂಗಳ ರಕ್ತ ತುಂಬಿ ಚೆಲ್ಲುತ್ತಿರುವುದು ಅದರ ಪ್ರತೀಕವಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ಲವ್ ಜಿಹಾದ್‌ನಿಂದಲೇ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಕೊಲೆ ನಡೆದಿದ್ದು, ಅದನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ಸರ್ಕಾರ ತೊಡಗಿದೆ. ಇದು ನಿಮ್ಮ ಹಿಂದೂ ವಿರೋಧಿ ನೀತಿಯಲ್ಲವೆ” ಎಂದು ಸಿದ್ದರಾಮಯ್ಯರನ್ನು ಅಶೋಕ್ ಪ್ರಶ್ನಿಸಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕೊಲೆ, ಸುಲಿಗೆ ಹೆಚ್ಚಾಗಿವೆ. ಗೂಂಡಾ ರಾಜ್ಯ ಮಾಡಲು ಹೊರಟಿದೆ. ಮುಸ್ಲಿಂ ಭಯೋತ್ಪಾದಕರು ಏನು ಮಾಡಿದರೂ ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗುವುದು ಸಹ ಅಪರಾಧವಾಗಿದೆ. ಹೀಗಾಗಿ ‘ಕಾಂಗ್ರೆಸ್ ಬಂದ್ರೆ ಡೇಂಜರ್’ ಎಂದು ಬಿಜೆಪಿ ಜಾಹೀರಾತು ನೀಡಿದೆ” ಎಂದರು.