Homeಕರ್ನಾಟಕಆಸ್ಟ್ರೇಲಿಯಾ ಸಚಿವರೊಂದಿಗೆ ಮಾತುಕತೆ, ರಾಜ್ಯದಲ್ಲಿ ಹೂಡಿಕೆಗೆ ಬೆಂಬಲ: ಎಂ ಬಿ ಪಾಟೀಲ

ಆಸ್ಟ್ರೇಲಿಯಾ ಸಚಿವರೊಂದಿಗೆ ಮಾತುಕತೆ, ರಾಜ್ಯದಲ್ಲಿ ಹೂಡಿಕೆಗೆ ಬೆಂಬಲ: ಎಂ ಬಿ ಪಾಟೀಲ

ರಾಜ್ಯದ ಕೈಗಾರಿಕಾ ರಂಗದ ವಿವಿಧ ವಲಯಗಳಲ್ಲಿ ಆಸ್ಟ್ರೇಲಿಯಾದ ಕಂಪನಿಗಳೊಂದಿಗೆ ಹೆಚ್ಚಿನ ಸಹಭಾಗಿತ್ವಕ್ಕೆ ಸರಕಾರವು ಉತ್ಸುಕವಾಗಿದ್ದು, ಇದಕ್ಕೆ ಅಗತ್ಯವಿರುವ ಎಲ್ಲ ಬಗೆಯ ಬೆಂಬಲವನ್ನೂ ಕೊಡಲಾಗುವುದು. ಆದ್ದರಿಂದ ಅಲ್ಲಿಯ ಕಂಪನಿಗಳು ರಾಜ್ಯದಲ್ಲಿ ಹೆಚ್ಚುಹೆಚ್ಚು ಬಂಡವಾಳ ಹೂಡಲು ಮುಂದೆ ಬರಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ದಕ್ಷಿಣ ಆಸ್ಟ್ರೇಲಿಯಾದ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಚಿವ ನಿಕ್‌ ಚಾಂಪಿಯನ್‌ ಅವರೊಂದಿಗೆ ವಿಚಾರ ವಿನಿಮಯ ನಡೆಸಿದ ಬಳಿಕ ಮಾತನಾಡಿದ ಅವರು, “ಕರ್ನಾಟಕ ಮತ್ತು ಆಸ್ಟ್ರೇಲಿಯಾ ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಸಂಶೋಧನೆ, ನವೀಕರಿಸಬಹುದಾದ ಇಂಧನ, ಗಣಿಗಾರಿಕೆ, ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರಗಳಲ್ಲಿ ಸಮಾನ ಶಕ್ತಿಯನ್ನು ಹೊಂದಿವೆ. ಆದ್ದರಿಂದ, ಸಹಭಾಗಿತ್ವಕ್ಕೆ ಇಲ್ಲಿ ಅಪಾರ ಅವಕಾಶವಿದ್ದು, ಆಸ್ಟ್ರೇಲಿಯಾದ ಹೂಡಿಕೆದಾರರು ಇದರತ್ತ ಗಮನ ಹರಿಸಬೇಕು” ಎಂದರು.

“ಆಸ್ಟ್ರೇಲಿಯಾದ ನೇರ ವಿದೇಶಿ ಹೂಡಿಕೆಯು ಭಾರತದಲ್ಲಿ ಈ ವರ್ಷದ ಮಾರ್ಚ್‌ ಹೊತ್ತಿಗೆ 1 ಬಿಲಿಯನ್‌ ಡಾಲರ್‌ ದಾಟಿದೆ. ಜೊತೆಗೆ, ಸರಕು ಮತ್ತು ಸೇವಾ ವಿಭಾಗಗಳಲ್ಲಿ ದ್ವಿಪಕ್ಷೀಯ ವಹಿವಾಟು ಎರಡು ವರ್ಷಗಳ ಹಿಂದೆಯೇ 21.5 ಬಿಲಿಯನ್‌ ಡಾಲರ್‌ಗಳಷ್ಟಿತ್ತು. ನಮ್ಮಿಂದ ನಡೆಯುತ್ತಿರುವ ರಫ್ತು ಮತ್ತು ಅಲ್ಲಿಂದ ಆಗುತ್ತಿರುವ ಆಮದು ಪ್ರಮಾಣ ಕೂಡ ಗಮನಾರ್ಹವಾಗಿದೆ” ಎಂದು ತಿಳಿಸಿದರು.

“ಎರಡೂ ದೇಶಗಳು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಇಟ್ಟುಕೊಂಡಿದ್ದು, ಇದು ಸಾಧ್ಯವಾಗಬೇಕಾದರೆ ಸಹಭಾಗಿತ್ವ ಗಣನೀಯವಾಗಿ ಹೆಚ್ಚಾಗಬೇಕು. ಇದನ್ನು ಆಸ್ಟ್ರೇಲಿಯಾ ಕೂಡ ಮನವರಿಕೆ ಮಾಡಿಕೊಂಡಿದೆ. ಇದರಿಂದ ಎರಡೂ ದೇಶಗಳ ಆರ್ಥಿಕತೆಗೆ ಅಪಾರ ಲಾಭವಿದೆ. ರಾಜ್ಯವು ಉದ್ಯಮಸ್ನೇಹಿ ನೀತಿಗಳಿಗೆ ಹೆಸರಾಗಿದ್ದು, ನಮ್ಮಲ್ಲಿ ಅತ್ಯುತ್ತಮ ಮೂಲಸೌಕರ್ಯ, ಕೌಶಲಪೂರ್ಣ ಮಾನವ ಸಂಪನ್ಮೂಲ ಕೂಡ ಸಮೃದ್ಧವಾಗಿದೆ” ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments