ಡಿ.19ರಿಂದ ಡಿ.22ರ ಒಳಗೆ ನಾವು ನಾಲ್ಕೈದು ಜನ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಪಕ್ಷದ ಹೈಕಮಾಂಡ್ ಜೊತೆ ಮಾತನಾಡಲು ಈಗ ಕಾಲ ಪಕ್ವವಾಗಿದೆ. ಮಾತನಾಡಿದ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಬಿಜೆಪಿ ಮುಖಂಡ ವಿ ಸೋಮಣ್ಣ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಾಲ ಬಂದಾಗ ಎಲ್ಲವನ್ನೂ ನೇರವಾಗಿಯೇ ಹೇಳುತ್ತೇನೆ. ಹೈಕಮಾಂಡ್ ಜೊತೆ ಎಲ್ಲ ವಿಚಾರ ಚರ್ಚೆ ಮಾಡಬೇಕಿದೆ. ವರಿಷ್ಠರ ತೀರ್ಮಾನದ ಪ್ರಕಾರ ನಡೆದುಕೊಳ್ಳುತ್ತೇನೆ” ಎಂದು ತಿಳಿಸಿದರು.
“ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣವೇನು? ಯಾರು ಕಾರಣ ಎಂಬುದನ್ನು ವಿವರವಾಗಿ ಹೇಳುತ್ತೇನೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಬೇಕಿದೆ. ಅದು ನನ್ನ ಪ್ರತಿಪಾದನೆ” ಎಂದರು.
“ಒಳ್ಳೆಯತನಕ್ಕೆ ಹಾಗೂ ದುಡಿಮೆ ಮಾಡಿದ ನನಗೆ ಆಗಿರುವ ಹಿನ್ನಡೆಯನ್ನು ಯಾವ ರೀತಿ ಸ್ವೀಕರಿಸಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದು ಪಕ್ಷಕ್ಕೂ ಮನವರಿಕೆಯಾಗಿದೆ. ಕಾರ್ತೀಕ ಹೋಗಿ ಧನುರ್ಮಾಸವೂ ಶುರುವಾಗಿದೆ. ಶೀಘ್ರದಲ್ಲೇ ಎಲ್ಲವನ್ನೂ ಹೇಳುವೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಯೋಚಿಸಿಲ್ಲ. ವರಿಷ್ಠರ ಭೇಟಿ ನಂತರ, ಅವರು ನೀಡುವ ಸೂಚನೆಯಂತೆ ನಡೆದುಕೊಳ್ಳುತ್ತೇನೆ” ಎಂದು ಹೇಳಿದರು.