ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕೋಮುಗಲಭೆ, ದೇಶ ವಿಭಜನೆಯ ಚರ್ಚೆ ಹುಟ್ಟು ಹಾಕುವ ಕೆಲಸಗಳಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, “ರಾಜ್ಯದಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮುಂದಿರುವ ಕಾರ್ಯತಂತ್ರಗಳು; ಕೋಮುಗಲಭೆ ಸೃಷ್ಟಿಸುವುದು, ದೇಶ ವಿಭಜನೆಯ ಚರ್ಚೆ ಹುಟ್ಟು ಹಾಕುವುದು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು, ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು, ಐಟಿ ಸೆಲ್‌ಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುವುದು, ಭಾರತೀಯ ಪರಂಪರೆಯನ್ನು ಅವಮಾನಿಸುವುದು” ಎಂದು ಟೀಕಿಸಿದೆ.
“ದೇಶದಲ್ಲಿ ಮತ್ತೊಮ್ಮೆ ಬಿಜೆಪಿಗೆ ದಾಖಲೆಯ 400 ಸ್ಥಾನಗಳು ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಒಪ್ಪಿಕೊಂಡಿದ್ದಾರೆ. ಆದರೂ ಕಾಂಗ್ರೆಸ್ಸಿನವರು ಅಭಿವೃದ್ಧಿ ಮಾಡುವುದು ಬಿಟ್ಟು ದಿಗಿಲು ಬಡಿದ ಮಂಗಗಳಂತೆ ಸರ್ಕಸ್ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದೆ.
“ತಿಲಕ ಕಂಡರೆ ಭಯ, ಕೇಸರಿ ಕಂಡರೆ ಕಳವಳ, ಹನುಮ ಧ್ವಜ ಕಂಡರೆ ಭೀತಿ, ರಾಮಮಂದಿರ ಎಂದರೆ ಕಿರಿಕಿರಿ, ಹಿಂದೂಗಳು ಎಂದರೆ ದ್ವೇಷ ಸಾಧಿಸುವ ಕಲೆಯನ್ನು ಇತ್ತೀಚೆಗೆ ಭಯಾನಕವಾಗಿ ರೂಢಿಸಿಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.
“ಸಿಎಂ ಸಿದ್ದರಾಮಯ್ಯ ಸಾಹೇಬರಿಗೆ ಟೋಪಿ ಕಂಡರೆ ಇರುವ ವ್ಯಾಮೋಹ ಹಿಂದೂ ನಂಬಿಕೆಗಳ ಮೇಲೆ ಇಲ್ಲದೆ ಇರುವುದು ಹಿಂದೂಗಳಿಗೆ ಮಾಡುತ್ತಿರುವ ದ್ರೋಹ, ವಂಚನೆ!. ಚುನಾವಣೆಗೂ ಮುನ್ನ ಟೆಂಪಲ್ ರನ್ ಮಾಡಿದ ನಕಲಿ ಹಿಂದೂ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆದ ಕೂಡಲೇ ಹಿಂದೂಗಳ ಮೇಲೇಕೆ ಇಷ್ಟೊಂದು ದ್ವೇಷ ಕಾರುತ್ತಿದಾರೆ ಎನ್ನುವ ಪ್ರಶ್ನೆ ನಾಡಿನ ಜನತೆಯನ್ನು ಕಾಡುತ್ತಿದೆ!” ಎಂದಿದೆ.