ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿ ಎಂದು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಸಲಹೆ ನೀಡಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಸಚಿವರನ್ನು ಅವರು ಆಹ್ವಾನಿಸಿದ್ದರು. ಆಗ ಕೆಲವು ಸಚಿವರು ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ” ಎಂದರು.
“ಹೈಕಮಾಂಡ್ ಜೊತೆ ಈ ವಿಚಾರವಾಗಿ ಚರ್ಚಿಸುವುದಾಗಿ ಸುರ್ಜೇವಾಲ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಹುದ್ದೆ ವಿಷಯವಾಗಿಯೇ ಚರ್ಚಿಸಲು ಅವರು ಸಭೆ ಕರೆದಿರಲಿಲ್ಲ. ಹೆಚ್ಚುವರಿ ಉಪ ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾವು ಸಲಹೆ ಮಾಡಬಹುದು. ಸಲಹೆ ತೆಗೆದುಕೊಳ್ಳುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ” ಎಂದು ತಿಳಿಸಿದರು.
“ಅಭ್ಯರ್ಥಿಗಳು, ಚುನಾವಣಾ ತಂತ್ರಗಾರಿಕೆ ಹೇಗಿರಬೇಕು ಎಂಬ ಬಗ್ಗೆ ವಿಚಾರ ವಿನಿಮಯ ಆಗಿದೆ. ನಾನು ಎರಡು ಬಾರಿ ಕೆಪಿಸಿಸಿ ಅಧ್ಯಕ್ಷನಾಗಿ ಎರಡು ಚುನಾವಣೆ ಎದುರಿಸಿದ್ದೆ. ಆ ಅನುಭವ ಹಂಚಿಕೊಂಡಿರುವೆ. ಅದು ಬಿಟ್ಟು ದೊಡ್ಡ ಪ್ರಮಾಣದ ಚರ್ಚೆ ಆಗಿಲ್ಲ” ಎಂದು ಹೇಳಿದರು.
ಸಚಿವರ ಸ್ಪರ್ಧೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ” ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಆದರೆ, ಸಚಿವರು ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದರೆ ಸ್ಪರ್ಧಿಸಬೇಕಾಗುತ್ತದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಕಳೆದ ಬಾರಿ ಕೃಷ್ಣ ಬೈರೇಗೌಡ ಅವರು ಸ್ಪರ್ಧೆ ಮಾಡಿರುವುದನ್ನು ಅವರು ಉದಾಹರಣೆ ಕೊಟ್ಟು ಹೇಳಿದ್ದಾರೆ” ಎಂದು ಹೇಳಿದರು.
“ಇದೇ 11ರಂದು ದೆಹಲಿಗೆ 28 ಸಚಿವರನ್ನು ದೆಹಲಿಗೆ ಬರಲು ವರಿಷ್ಠರು ಹೇಳಿದ್ದಾರೆ. ಒಬ್ಬೊಬ್ಬ ಸಚಿವರಿಗೆ ಒಂದೊಂದು ಲೋಕಸಭೆ ಕ್ಷೇತ್ರ ಜವಾಬ್ದಾರಿ ಕೊಟ್ಟಿದ್ದಾರೆ. ಅವರೆಲ್ಲರನ್ನೂ ಕರೆದು ಸಲಹೆ ಸೂಚನೆ ಕೊಡುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ತರಲು ಹೇಳಿದ್ದಾರೆ” ಎಂದರು.