ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿದ್ದು, ಕಾಂಗ್ರೆಸ್ ಭಾರಿ ಸಿದ್ಧತೆ ಮಾಡಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಕಹಳೆ ಮೊಳಗಿಸಲಿದೆ.
ಮಂಗಳೂರಿನಲ್ಲಿ ಇಂದು (ಫೆ.17) ಕಾಂಗ್ರೆಸ್ ಕಾರ್ಯಕರ್ತರ ಮೊದಲ ಸಮಾವೇಶ ಆಯೋಜಿಸಲಾಗಿದೆ. ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ.
ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಮೊದಲ ಸಮಾವೇಶ ಇದಾಗಿದ್ದು, ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಈ ಸಮಾವೇಶದಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಸಿಎಂ ಡಿ ಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್, ವೇಣುಗೋಪಾಲ್ ಸೇರಿದಂತೆ ರಾಜ್ಯದ ಇತರ ಸಚಿವರು ಭಾಗಿಯಾಗಲಿದ್ದಾರೆ.
ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಮೂರು ಬಾರಿ ಗೆದ್ದು ಬಂದಿದ್ದರೂ, ಈ ಬಾರಿ ಪಕ್ಷದೊಳಗೆ ಹಾಗೂ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 2ನ್ನು ಮಾತ್ರ ಕಾಂಗ್ರೆಸ್ ಗೆಲ್ಲಲು ಸಮರ್ಥವಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲಿಷ್ಠಗೊಳಿಸಲು ಕಾಂಗ್ರೆಸ್ ಸೂತ್ರ ಹೆಣೆಯುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಸದಾ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್‌ಗೆ ಈ ಸಮಾವೇಶ ಶಕ್ತಿ ತುಂಬುವ ಪ್ರಯತ್ನ ಎಂದೇ ಬಿಂಬಿಸಲಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಹೇಗಾದರೂ ಮಾಡಿ ಅಸ್ತಿತ್ವ ಸಾಧಿಸಲು ಕಾಂಗ್ರೆಸ್ ಇಂದಿನ ಸಮಾವೇಶದ ಮೂಲಕ ಮುನ್ನುಡಿ ಬರೆಯುತ್ತಿದೆ.
ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಪಕ್ಕದ ಚಿಕ್ಕಮಗಳೂರಿನಿಂದ ಹೆಚ್ಚಿನ ಮತಗಳನ್ನು ಸೆಳೆಯಲು ಈ ಸಮಾವೇಶದ ಮೂಲಕ ಪ್ಲಾನ್ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಸಮಾವೇಶಕ್ಕೆ ಸಕಲ ಸಿದ್ಧತೆ ಪೂರ್ಣವಾಗಿದ್ದು, ಚಿಕ್ಕಮಗಳೂರು, ಕಾಸರಗೋಡು, ಕೊಡಗುಗಳಿಂದ ಮತ್ತು ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ.
ಡ್ರೋನ್ ಹಾರಾಟ ನಿಷೇಧ
ಕಾಂಗ್ರೆಸ್ ನ ರಾಜ್ಯ ಮಟ್ಟದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗುವ ಹಿನ್ನೆಲೆಯಲ್ಲಿ ಡ್ರೋನ್ ಹಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಈ ಆದೇಶ ಹೊರಡಿಸಿದ್ದಾರೆ.
ಸಂಚಾರದಲ್ಲಿ ವ್ಯತ್ಯಯ
ಮಂಗಳೂರು ನಗರ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮುಂಭಾಗದ ಮೈದಾನದಲ್ಲಿ ಕಾಂಗ್ರೆಸ್‌ನ ಬೃಹತ್ ಸಮಾವೇಶ ನಡೆಯಲಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸಮಾವೇಶದ ನಡೆಯಲಿರುವುದರಿಂದ ಇಂದು ಬೆಳಗ್ಗಿನಿಂದ ಬಿಸಿರೋಡ್‌ನಿಂದ ಮಂಗಳೂರಿಗೆ ಬರುವ ವಾಹನಗಳು ಬಿಸಿರೋಡ್-ಪಾಣೆಮಂಗಳೂರು-ಮುಡಿಪು-ಪಂಪ್ವೆಲ್ ಮಾರ್ಗವಾಗಿ ಮಂಗಳೂರಿಗೆ, ಮಂಗಳೂರಿನಿಂದ ಹೊರಗೆ ಹೋಗುವ ವಾಹನಗಳಿಗೂ ಮುಡಿಪು-ಪಾಣೆಮಂಗಳೂರು ರಸ್ತೆ ಬಳಸುವಂತೆ ಸೂಚನೆ ನೀಡಲಾಗಿದೆ.