Homeಕರ್ನಾಟಕರಾಜ್ಯ ಸರ್ಕಾರ ಖಜಾನೆ ಖಾಲಿ ಮಾಡಿಕೊಂಡು, ದೆಹಲಿ ಚಲೋ ಮಾಡುತ್ತಿದೆ: ಬಿ ವೈ ವಿಜಯೇಂದ್ರ

ರಾಜ್ಯ ಸರ್ಕಾರ ಖಜಾನೆ ಖಾಲಿ ಮಾಡಿಕೊಂಡು, ದೆಹಲಿ ಚಲೋ ಮಾಡುತ್ತಿದೆ: ಬಿ ವೈ ವಿಜಯೇಂದ್ರ

ದೆಹಲಿ ಚಲೋ ಮಾಡಿದ ಕಾಂಗ್ರೆಸ್ಸಿಗರಿಗೆ ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳಿಸುವ ಮೂಲಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಹೇಳಿದರು.

ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ಷೇಪಿಸಿ, ಸರಕಾರದ ವಿರುದ್ಧ ರಾಜ್ಯ ಬಿಜೆಪಿ ವತಿಯಿಂದ ಬುಧವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಇದರ ನೇತೃತ್ವ ವಹಿಸಿ ಮಾತನಾಡಿದ ಅವರು, “ಬಿಜೆಪಿ ಸರಕಾರವು ಬರಗಾಲದ ಸಂದರ್ಭದಲ್ಲೂ ಸಮರ್ಪಕವಾಗಿ ವಿದ್ಯುತ್ ನೀಡಿತ್ತು. ಆದರೆ, ಕಾಂಗ್ರೆಸ್ ಸರಕಾರವು ಸರಿಯಾಗಿ ವಿದ್ಯುತ್ ಕೊಟ್ಟಿಲ್ಲ” ಎಂದು ಆರೋಪಿಸಿದರು.

“ಸರಕಾರವು ತನ್ನ ಖಜಾನೆಯನ್ನು ಖಾಲಿ ಮಾಡಿಕೊಂಡಿದೆ. ದೆಹಲಿ ಚಲೋ ಮೂಲಕ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಸಮರ್ಥ ಆಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.

“ಎಸ್‍ಸಿ, ಎಸ್‍ಟಿ ಸಮುದಾಯದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರವು ಬಡವರ ವಿರೋಧಿ, ದಲಿತರ ವಿರೋಧಿ ಮಾತ್ರವಲ್ಲದೆ ರೈತವಿರೋಧಿಯಾಗಿದೆ. ರಾಜ್ಯಕ್ಕೆ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್‍ನಿಂದ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಒಳಿತುಗಳೇ ಆಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಪೊಲೀಸರ ವಶಕ್ಕೆ

ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ, ಬಳಿಕ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು.

“ರೈತರು ಸಂಕಷ್ಟದಲ್ಲಿದ್ದರೆ ಮಜಾ ಮಾಡಲು ಕಾಂಗ್ರೆಸ್‌ನವರು ದೆಹಲಿಗೆ ಹೋಗಿದ್ದಾರೆ. ಅವರ ದೆಹಲಿ ಪ್ರವಾಸದಿಂದ ವಿಧಾನಸೌಧ ಖಾಲಿ ಖಾಲಿಯಾಗಿದೆ. ಸಚಿವರಿಲ್ಲದೆ ಅಧಿಕಾರಿಗಳಿಗೆ ಕೆಲಸ ಇಲ್ಲದಂತಾಗಿದೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್”‌ ಕಿಡಿಕಾರಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments