Homeಕರ್ನಾಟಕರಾಜ್ಯದ ಬರ ಪರಿಸ್ಥಿತಿ ಬಿಚ್ಚಿಟ್ಟು, ಶೀಘ್ರ ಬರ ಪರಿಹಾರ ಕಲ್ಪಿಸಲು ಕೇಂದ್ರಕ್ಕೆ ಸಿದ್ದರಾಮಯ್ಯ ಮನವಿ

ರಾಜ್ಯದ ಬರ ಪರಿಸ್ಥಿತಿ ಬಿಚ್ಚಿಟ್ಟು, ಶೀಘ್ರ ಬರ ಪರಿಹಾರ ಕಲ್ಪಿಸಲು ಕೇಂದ್ರಕ್ಕೆ ಸಿದ್ದರಾಮಯ್ಯ ಮನವಿ

ತೀವ್ರ ಬರಗಾಲ ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಿ, ಅಧ್ಯಯನ ನಡೆಸಿ ತಿಂಗಳಾದರೂ ಇನ್ನೂ ಪರಿಹಾರ ದೊರಕಿಲ್ಲ. ಹೀಗಾಗಿ ತಾವು ಮಧ್ಯಪ್ರವೇಶಿಸಿ ಶೀಘ್ರದಲ್ಲಿ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಯಾಗುವಂತೆ ಮಾಡಬೇಕು ಎಂದು ಕೇಂದ್ರ ಕೃಷಿ ಸಚಿವರು, ಗೃಹ ಸಚಿವರು ಹಾಗೂ ವಿತ್ತ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಎನ್‌ಡಿಆರ್‌ಎಫ್‌ನಿಂದ ತ್ವರಿತಗತಿಯಲ್ಲಿ ಬರ ಪರಿಹಾರವನ್ನು ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪೂರ್ಣ ಪತ್ರ ಇಲ್ಲಿದೆ.

2023ರ ಮಳೆಗಾಲದಲ್ಲಿ ಕರ್ನಾಟಕದ ಬಹುತೇಕ ಭಾಗವು ಬರ ಪರಿಸ್ಥಿತಿ ಎದುರಿಸಿದೆ ಎಂಬುದು ನಿಮಗೂ ತಿಳಿದಿರುವ ವಿಚಾರ. ಮಳೆಗಾಲವು ರಾಜ್ಯದಲ್ಲಿ 1 ವಾರ ತಡವಾಗಿ, ಜೂನ್‌ 10ರಿಂದ ಆರಂಭಗೊಂಡಿದೆ. ವಿಳಂಬವಾಗಿ ಆರಂಭಗೊಂಡ ಮುಂಗಾರು ಜೂನ್‌ ತಿಂಗಳಲ್ಲಿ ಕನಿಷ್ಠ ಮಳೆಯಾಗಿದೆ, ಇದರಿಂದ 56% ಮಳೆ ಕೊರತೆ ಸಂಭವಿಸಿದೆ, ಇದು ರಾಜ್ಯದಲ್ಲಿ 122 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಮಳೆ ಎಂದು ದಾಖಲಾಗಿದೆ.

ಇದಾದ ಬಳಿಕ, ಜುಲೈ ತಿಂಗಳ 3ನೇ ಮತ್ತು 4ನೇ ವಾರದಲ್ಲಿ ಉತ್ತಮ ಮಳೆ ಸುರಿಯುವ ಲಕ್ಷಣಗಳಿದ್ದವು, ಆದರೆ ಅದು ಕೇವಲ 10 ದಿನಗಳಿಗೆ ಸೀಮಿತವಾಯಿತು. ಜೂನ್‌ನಲ್ಲಿ ಮಳೆಯ ಕೊರತೆಯಿಂದಾಗಿ ಅನೇಕ ರೈತರು ಜುಲೈ ಆರಂಭದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಆಗಸ್ಟ್ 2023 ರಲ್ಲಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೆಳವಣಿಗೆಯ ನಿರ್ಣಾಯಕ ಹಂತದಲ್ಲೇ ಒಟ್ಟಾರೆಯಾಗಿ ಕರ್ನಾಟಕದಲ್ಲಿ 73% ಮಳೆ ಕೊರತೆ ಸಂಭವಿಸಿದೆ, ಇದು ಆಗಸ್ಟ್ ತಿಂಗಳಿನಲ್ಲಿ ಕಳೆದ 122 ವರ್ಷಗಳಲ್ಲಿ ದಾಖಲಾದ ಕಡಿಮೆ ಪ್ರಮಾಣದ ಮಳೆಯಾಗಿದೆ.

ಅಕ್ಟೋಬರ್‌ನಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ

ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ ಅಧಿಕ ಮಳೆ ಕೊರತೆಯ ಜೊತೆಗೆ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ ಹಾಗೂ ಇದರಿಂದ ಮಳೆಯಾಶ್ರಿತ ಪ್ರದೇಶಗಳಲ್ಲಿನ ಹೆಚ್ಚಿನ ಭಾಗಗಳಲ್ಲಿ ಬೆಳೆದಿರುವ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಸೆಪ್ಟೆಂಬರ್‌ ಅವಧಿಯಲ್ಲಿ, ಪ್ರಮುಖ ಖಾರಿಫ್ ಪ್ರದೇಶ ಒಳಗೊಂಡಿರುವ ರಾಜ್ಯದ ಒಳಾಂಗಣ ಪ್ರದೇಶಗಳು ಮಳೆ ಕೊರತೆಗೆ ಸಾಕ್ಷಿಯಾಗಿವೆ, ಇದು ಬೆಳೆಗಳ ಪಕ್ವತೆಯ ಹಂತದಲ್ಲಿ ಮಣ್ಣಿನ ತೇವಾಂಶದ ಒತ್ತಡಕ್ಕೆ ಕಾರಣವಾಯಿತು. ಇದಲ್ಲದೆ, ಅಕ್ಟೋಬರ್‌ನಲ್ಲಿ ಬರ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿದೆ.

ಬರ ಕೈಪಿಡಿ 2020ರಲ್ಲಿ ವಿವರಿಸಲಾದ ಎಲ್ಲಾ ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಅನುಸಾರವಾಗಿ ಕರ್ನಾಟಕದ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಪ್ರದೇಶಗಳು ಎಂದು ಘೋಷಿಸಲಾಗಿದೆ. ಈ ಪೈಕಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ. ರಾಜ್ಯ ಸರ್ಕಾರವು 22-09-2023ರಂದು ಎನ್‌ಡಿಆರ್‌ಎಫ್‌ನಿಂದ ಬರ ಪರಿಹಾರವನ್ನು ನಿರೀಕ್ಷಿಸಿ ಮತ್ತು 195 ಬರ ಪೀಡಿತ ತಾಲೂಕುಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಖಾರಿಫ್‌ ಬರ ನಿವೇದನೆ ವರದಿಯನ್ನು ಸಲ್ಲಿಕೆ ಮಾಡಿದೆ. ಇದರ ಪರಿಣಾಮವಾಗಿ ರಾಜ್ಯದ ಬರ ಪರಿಸ್ಥಿತಿಯನ್ನು ನಿರ್ಣಯಿಸಲು 10 ಸದಸ್ಯರನ್ನು ಒಳಗೊಂಡ ಕೇಂದ್ರ ತಂಡ (IMCT)ವು ಅಕ್ಟೋಬರ್ 5ರಿಂದ ಅಕ್ಟೋಬರ್ 9ರ ವರೆಗೆ ಕರ್ನಾಟಕದ ಕೆಲವು ಬರ ಪ್ರದೇಶಗಳಿಗೆ ಭೇಟಿ ನೀಡಿದೆ.

ತಿಂಗಳ ಹಿಂದೆಯೇ ಮನವಿ

ಬರ ಪರಿಸ್ಥಿತಿಯಿಂದ ಹದಗೆಡುತ್ತಿರುವ ರಾಜ್ಯದ ಪರಿಸ್ಥಿತಿಯ ಬಗ್ಗೆ, 2023ರ ಮಳೆಗಾಲದ ಸಂಪೂರ್ಣ ಋತುಮಾನವನ್ನು ಗಮನದಲ್ಲಿಟ್ಟುಕೊಂಡು ಮರು ಅಧ್ಯಯನ ನಡೆಸಲಾಯಿತು ಮತ್ತು ಹೆಚ್ಚುವರಿಯಾಗಿ 21 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಯಿತು. ಹೆಚ್ಚುವರಿ 21 ಬರ ಪೀಡಿತ ತಾಲೂಕುಗಳಿಗೆ ಎನ್‌ಡಿಆರ್‌ಎಫ್‌ನಿಂದ ಹಣಕಾಸಿನ ನೆರವು ಕೋರಿ ಪೂರಕ ನಿವೇದನೆ ಪತ್ರವನ್ನು 09-10-2023 ರಂದು ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಇದಲ್ಲದೆ, ನೈಋತ್ಯ ಮುಂಗಾರು ಕರ್ನಾಟಕದ ಕರಾವಳಿಯಲ್ಲಿ ಜೂನ್ 10, 2023 ರಂದು ಪ್ರಾರಂಭವಾಯಿತು, ಸಾಮಾನ್ಯವಾಗಿ ಜೂನ್‌ 5ರಂದು ಆರಂಭಗೊಳ್ಳಬೇಕಿತ್ತು, ಆದರೆ 5 ದಿನಗಳು ತಡವಾಗಿ ಆಗಮಿಸಿದೆ. ಅದರಂತೆ, ನೈಋತ್ಯ ಮುಂಗಾರು ಕರ್ನಾಟಕದಲ್ಲಿ ಮತ್ತು ಇಡೀ ಭಾರತದಲ್ಲಿ 2023ರ ಅಕ್ಟೋಬರ್‌ 19ರಂದು ಕೊನೆಗೊಂಡಿದೆ. ಸಾಮಾನ್ಯವಾಗಿ ಅಕ್ಟೋಬರ್‌ 15ಕ್ಕೆ ಕೊನೆಗೊಳ್ಳುತ್ತಿತ್ತು. ಆದರೆ ಈ ಬಾರಿ 4 ದಿನಗಳ ವ್ಯತ್ಯಾಸ ಕಂಡುಬಂದಿದೆ.

ಹೆಚ್ಚುವರಿ ನಿವೇದನಾ ಪತ್ರ 

ನೈರುತ್ಯ ಮುಂಗಾರು ವಿಳಂಬದಿಂದ ರಾಜ್ಯದ ಕೃಷಿ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ, ಕೆಲವು ನಿರ್ದಿಷ್ಟ ತಾಲೂಕುಗಳಲ್ಲಿ ಬಿತ್ತನೆ ಕ್ರಮದ ಮೇಲೆ ಪರಿಣಾಮ ಬೀರಿದೆ ಮತ್ತು ಬಿತ್ತನೆ ಕಾರ್ಯಗಳ ವಿಳಂಬಕ್ಕೆ ಕಾರಣವಾಗಿದೆ. ಹಾಗಾಗಿ, ಬರ ಪರಿಸ್ಥಿತಿ ಬಗ್ಗೆ ಅಕ್ಟೋಬರ್‌ ಅಂತ್ಯದಲ್ಲಿ ಪುನಃ ಅಧ್ಯಯನ ನಡೆಸಲಾಯಿತು ಮತ್ತು ಹೆಚ್ಚುವರಿಯಾಗಿ 7 ತಾಲೂಕುಗಳನ್ನು 2023ರ ಖಾರಿಫ್‌ನಲ್ಲಿ ಬರ ಪೀಡಿತ ಎಂದು ಘೋಷಿಸಲಾಯಿತು. ರಾಜ್ಯ ಸರ್ಕಾರವು 7 ಬರ ಪೀಡಿತ ತಾಲೂಕುಗಳಿಗೂ ಹಣಕಾಸಿನ ನೆರವನ್ನು ನಿರೀಕ್ಷಿಸಿ ಹೆಚ್ಚುವರಿಯಾಗಿ ನಿವೇದನಾ ಪತ್ರವನ್ನು ಬರೆದಿದೆ.

ಒಟ್ಟಾರೆ ಖಾರಿಫ್‌ 2023ರಲ್ಲಿ, ಸುಮಾರು 48 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಒಟ್ಟಾರೆ ಹಾನಿಗೊಂಡ ಬೆಳೆಗಳ ಒಟ್ಟು ಮೌಲ್ಯ 35162.05 ಕೋಟಿ ರೂಪಾಯಿಗಳಾಗಿವೆ. ರಾಜ್ಯ ಸರ್ಕಾರವು 18171.44 ಕೋಟಿ ರೂಪಾಯಿ ಬರ ಪರಿಹಾರವನ್ನು ಎನ್‌ಡಿಆರ್‌ಎಫ್‌ನಿಂದ ಬಿಡುಗಡೆ ಮಾಡಬೇಕು ಎಂದು ಕೋರಿದೆ.

ರಾಜ್ಯ ಸರ್ಕಾರದ ಕಂದಾಯ ಸಚಿವರ ನೇತೃತ್ವದಲ್ಲಿ ನೈಸರ್ಗಿಕ ವಿಕೋಪ ನಿರ್ವಹಣೆಯ ಸಂಪುಟದ ಉಪ ಸಮಿತಿಯು ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲು ನಿಮ್ಮ ಕಚೇರಿಗೆ ಆಗಮಿಸಿ ಭೇಟಿಯಾಗಲು ಹಲವು ಬಾರಿ ಪ್ರಯತ್ನಗಳನ್ನು ನಡೆಸಿದೆ. ಆದರೆ ದುರಾದೃಷ್ಟವಶಾತ್‌ ಭೇಟಿಗೆ ಸಮ್ಮತಿ ಸಿಕ್ಕಿಲ್ಲ.

ಆದಾಗ್ಯೂ, ಕ್ಯಾಬಿನೆಟ್ ಉಪ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು 25-10-2023 ರಂದು ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿಯ ಕುರಿತು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ತಿಳಿಸಿದ್ದಾರೆ. ಈ ವೇಳೆ ಎನ್‌ಡಿಆರ್‌ಎಫ್‌ ಅಡಿಯಲ್ಲಿ ಬೆಳೆ ನಷ್ಟಕ್ಕೆ ಇನ್‌ಪುಟ್‌ ಸಬ್ಸಿಡಿ ನೀಡಲು 8 ವರ್ಷದ ಹಳೆಯ 2015ರ ಕೃಷಿ ಗಣತಿ ದತ್ತಾಂಶವನ್ನು ಪೂರಕವಾಗಿ ಬಳಕೆ ಮಾಡುತ್ತಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಕಳಕಳಿ ವಿನಂತಿ: ಸಿಎಂ

ಈ ಕ್ರಮದಿಂದ ನಮ್ಮ ರಾಜ್ಯದದ ಸಣ್ಣ ಮತ್ತು ಅತಿ ಸಣ್ಣ ರೈತರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಳೆಯ ಕೃಷಿ ಗಣತಿ ದತ್ತಾಂಶದ ಮೇಲಿನ ಅವಲಂಬನೆಯನ್ನು ಪರಿಶೀಲಿಸುವುದು ಸೂಕ್ತವಾಗಿದೆ. ರಾಜ್ಯವು ನಿರ್ವಹಿಸುತ್ತಿರುವ ಎಸ್‌ಎಂಎಫ್‌ ಶೇಕಡಾವಾರು ಮತ್ತು ಫ್ರೂಟ್ಸ್‌ನ (FRUITS) ರೈತರ ಸಂಖ್ಯೆ (ರೈತರ ದಾಖಲಾತಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ದತ್ತಾಂಶವನ್ನು ಪರಿಗಣಿಸುವಂತೆ ನಾನು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ.

ಏಕೆಂದರೆ ಈ ದತ್ತಾಂಶವು ಭೂಮಿ ಹಿಡುವಳಿ ಸೇರಿದಂತೆ ಪ್ರತಿಯೊಬ್ಬ ರೈತರ ಮಾಹಿತಿಯನ್ನು ಒಳಗೊಂಡಿದೆ ಮತ್ತು ಪ್ರಾದೇಶಿಕ ಭೂದಾಖಲಾತಿಗಳು ‘ಭೂಮಿ’ಗೆ ಲಿಂಕ್‌ ಆಗಿವೆ. ಫ್ರೂಟ್ಸ್‌ ದತ್ತಾಂಶದ ಪ್ರಕಾರ 31 ಜಿಲ್ಲೆಗಳಲ್ಲಿ ಸುಮಾರು 52.73 ಲಕ್ಷ ರೈತರಿಗೆ 2 ಹೆಕ್ಟೆರ್‌ಗಿಂತ ಕಡಿಮೆ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರು ಹೆಚ್ಚಾಗಿ ಬರದ ಪರಿಣಾಮ ಎದುರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ ಮತ್ತು ಇನ್‌ಪುಟ್‌ ಸಬ್ಸಿಡಿಯು ಕೃಷಿ ಚಟುವಟಿಕೆಗಳನ್ನು ಪುನರಾರಂಭಿಸಲು ಅವರಿಗೆ ಲಭ್ಯವಿರುವ ಏಕೈಕ ಆಶ್ರಯವಾಗಿದೆ.

ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ

ಕೃಷಿ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನ ಮತ್ತು ಕುಟುಂಬಗಳ ಜೀವನ ಪೋಷಣೆಗಾಗಿ ಉಚಿತ ಪರಿಹಾರವನ್ನು ಪಾವತಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ರೂ.12577.9 ಕೋಟಿಗಳನ್ನು ಕೋರುತ್ತಿದೆ. ರಾಜ್ಯದಾದ್ಯಂತ ಚಾಲ್ತಿಯಲ್ಲಿರುವ ಬರ ಪರಿಸ್ಥಿತಿಯು ಕೃಷಿಯನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ, ಇದು ಬೆಳೆ ವೈಫಲ್ಯ ಮತ್ತು ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಹಾಗಾಗಿ, ಬರ ಪೀಡಿತ ಕುಟುಂಬಗಳ ಮೇಲಿನ ಪರಿಣಾಮವನ್ನು ನಿವಾರಿಸಲು ಮತ್ತು ಅವರ ಜೀವನೋಪಾಯವನ್ನು ಬೆಂಬಲಿಸಲು ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ನಿಯಮಗಳ ಸಂಖ್ಯೆ 1 (ಇ) ನಲ್ಲಿ ನಿಗದಿಪಡಿಸಿದಂತೆ ಆರ್ಥಿಕ ನೆರವಿನ ಹೊರತಾದ ಪರಿಹಾರವನ್ನು (ಜಿಆರ್) ಒದಗಿಸುವ ತುರ್ತು ಅವಶ್ಯಕತೆಯಿದೆ.

ಅತಿ ಕಡಿಮೆ ಎಸ್‌ಡಿಆರ್‌ಎಫ್ ಅನುದಾನ ಹಂಚಿಕೆಯಾಗುತ್ತಿರುವ ಕರ್ನಾಟಕದಂತಹ ರಾಜ್ಯಕ್ಕೆ ಆರ್ಥಿಕ ನೆರವಿನ ಹೊರತಾದ ಸಹಾಯಗಳಿಗೆ 50% ಮಿತಿ ನಿಗದಿಪಡಿಸಿರುವುದರಿಂದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನಷ್ಟು ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕೇತರ ನೆರವು ನೀಡಲು ಎನ್‌ಡಿಆರ್‌ಎಫ್ ಅಡಿ ಪರಿಹಾರ ಕೋರುತ್ತಿದ್ದೇವೆ.

ಈ ಹಿಂದಿನ ಬರ ನಿರ್ವಹಣೆ ಕೈಪಿಡಿ 2020ರ ಮತ್ತು ಎಂಎಚ್‌ಎ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ನ ಅಡಿಯ ನೀತಿ ನಿಯಮಗಳ ನಡುವಣ ಇನ್‌ಪುಟ್‌ ಸಬ್ಸಿಡಿ ಅರ್ಹತಾ ಮಾನದಂಡಗಳನ್ನು ಸಮನ್ವಯಗೊಳಿಸುವ ಅವಶ್ಯಕತೆಯಿದೆ. ಬರ ನಿರ್ವಹಣೆ 2020ರ ಕೈಪಿಡಿಯಲ್ಲಿ 50% ಗಿಂತ ಹೆಚ್ಚು ಬೆಳೆ ನಷ್ಟವಾಗಿದ್ದರೆ ಅದನ್ನು ‘ತೀವ್ರ’ ಎಂದು ಪರಿಗಣಿಸಲಾಗಿದೆ ಮತ್ತು ಇನ್‌ಪುಟ್‌ ಸಬ್ಸಿಡಿಗೆ ಅರ್ಹ ಎನ್ನಲಾಗಿದೆ. ಆದರೆ ಗೃಹ ಸಚಿವಾಲಯ ಹೊರಡಿಸಿರುವ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ನಿರ್ದಿಷ್ಟ ವಿಕೋಪದಿಂದ ಬೆಳೆ ನಷ್ಟವು 33% ಗಿಂತ ಹೆಚ್ಚಿದ್ದರೆ ಅನುದಾನಕ್ಕೆ ಅರ್ಹರಾಗಿತ್ತಾರೆ. ಬರ ವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಬರ ಕೈಪಿಡಿ- 2020ರ ಅನ್ವಯ 27 ಸಾಧಾರಣ ಬರಪೀಡಿತ ತಾಲ್ಲೂಕುಗಳಲ್ಲಿ 33% ಗಿಂತಲೂ ಹೆಚ್ಚು ಬೆಳೆ ನಷ್ಟವಾಗಿರುವುದು ಕಂಡುಬಂದಿದೆ. ಇದನ್ನು ಕೂಡ ಎನ್‌ಡಿಆರ್‌ಎಫ್ ನಡಿ ಇನ್‌ಪುಟ್ ಸಬ್ಸಿಡಿ ಪಡೆಯಲು ಪರಿಗಣಿಸಬೇಕು.

ಜಲವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ

ಮುಂಬರುವ ತಿಂಗಳುಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿಯು ಹದಗೆಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ, ಮಳೆಗಾಲದ ನಂತರ ರಾಜ್ಯಗಳಲ್ಲಿನ ಪ್ರಮುಖ ಜಲಾಶಯಗಳು ಒಟ್ಟು ಸಾಮರ್ಥ್ಯದ 53% ಮಾತ್ರ ನೀರನ್ನು ಹೊಂದಿವೆ. ನಮ್ಮ ಜಲಸಂಗ್ರಹಾಗಾರಗಳಲ್ಲಿನ ಶೇಖರಣಾ ಮಟ್ಟದಲ್ಲಿನ ಈ ಕುಸಿತವು ನಮ್ಮ ಜಲವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ಇದು ರಾಜ್ಯದ ವಿದ್ಯುತ್‌ ಅಗತ್ಯತೆಯ 20% ರಷ್ಟಿದೆ.

ಬರಗಾಲದ ಪರಿಣಾಮವನ್ನು ತಗ್ಗಿಸಲು ರಾಜ್ಯ ಸರ್ಕಾರವು ಪೂರ್ವಭಾವಿ ಮತ್ತು ಸಹಕಾರಿ ಕ್ರಮಗಳನ್ನು ಕೈಗೊಂಡಿದೆ. ಅಕ್ಟೋಬರ್‌ನಲ್ಲಿ, ತಕ್ಷಣದ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು 31 ಜಿಲ್ಲೆಗಳಿಗೆ ಎಸ್‌ಡಿಆರ್‌ಎಫ್‌ನಿಂದ 324 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಋತುಗಳ ಪರಿಸ್ಥಿತಿಗೆ ಅನುಗುಣವಾಗಿ ಸಾಪ್ತಾಹಿಕ ನಿರ್ವಹಣೆಯನ್ನು ಎಸ್‌ಡಬ್ಳ್ಯುಎಂ ಜೊತೆಗೆ ಆರಂಭಿಸಲಾಯಿತು. ಪರಿಸ್ಥಿತಿ ಅವಲೋಕನಕ್ಕೆ ನಿಯಮಿತವಾಗಿ ಹವಾಮಾನ ವೀಕ್ಷಣಾ ಸಮಿತಿ ಜೊತೆ ಸಂಪರ್ಕವಿರಿಸಿಕೊಳ್ಳಲಾಗಿದೆ.

ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪಸಮಿತಿಯು ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಆರು ಬಾರಿ ಸಭೆ ನಡೆಸಿತು, ಪರಿಹಾರಕ್ಕಾಗಿ ಅಗತ್ಯ ನೀತಿಗಳನ್ನು ಜಾರಿಗೊಳಿಸಿತು. ವೈಯಕ್ತಿಕವಾಗಿ, ನಾನು ಹವಾಮಾನ ಪರಿಸ್ಥಿತಿ ಅವಲೋಕನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ, ಪರಿಸ್ಥಿತಿಯನ್ನು ಪ್ರಾಯೋಗಿಕವಾಗಿ ಎದುರಿಸಲು ಕೈಜೋಡಿಸಿದ್ದೇನೆ. ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳು, ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಜಾರಿಗೊಳಿಸಲಾದ ಯೋಜನೆಗಳು ಬರಗಾಲದ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ, ಆದಾಗ್ಯೂ ಎನ್‌ಡಿಆರ್‌ಎಫ್‌ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಸಹಾಯವನ್ನು ಮಾಡಬಹುದಾಗಿದೆ.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯು ಸಲ್ಲಿಸಿರುವ ತನ್ನ ಶಿಫಾರಸ್ಸುಗಳಿಗೆ ಆದಷ್ಟು ಬೇಗ ಪ್ರತಿಕ್ರಿಯಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ನೀವು ಪ್ರಕ್ರಿಯೆಯನ್ನು ತ್ವರಿತಗೊಳಿಸಿದರೆ ಮತ್ತು ಎನ್‌ಡಿಆರ್‌ಎಫ್‌ನಿಂದ ತ್ವರಿತಗತಿಯಲ್ಲಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮಾಡಿದರೆ ನಾನು ಕೃತಜ್ಞನಾಗುತ್ತೇನೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಇನ್‌ಪುಟ್‌ ಸಬ್ಸಿಡಿ ಮತ್ತು ಆರ್ಥಿಕ ಸಹಾಯದ ಹೊರತಾದ ಪರಿಹಾರವನ್ನು ಸಕಾಲದಲ್ಲಿ ವಿತರಿಸಲು ಅನುಕೂಲವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments