ಉಡುಪಿ-ಚಿಕ್ಕಮಗಳೂರಿನ ಜನರು ತಿರಸ್ಕರಿದ ಬಿಜೆಪಿಯ ಶೋಭಾ ಕರಂದ್ಲಾಜೆಯನ್ನು ಬೆಂಗಳೂರು ಉತ್ತರದ ಜನರು ಸಹ ತಿರಸ್ಕರಿಸಿ, ಮುಖಭಂಗ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ ನೀಡಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ಎಂ.ವಿ. ರಾಜೀವ್ ಗೌಡ ಅವರ ಪರವಾಗಿ ಸೋಮವಾರ ಬಿರುಸಿನ ಪ್ರಚಾರ ನಡೆಸಿ, ಬಳಿಕ ಮಾತನಾಡಿದ ಅವರು, “ಕೇಂದ್ರದಲ್ಲಿ ಮಂತ್ರಿಯಾಗಿದ್ದರೂ ಸಹ ಶೋಭಾ ಕರಂದ್ಲಾಜೆ ನಯಾಪೈಸೆಯ ಅಭಿವೃದ್ಧಿ ಕೆಲಸ ಮಾಡಲಿಲ್ಲ” ಎಂದು ಹರಿಹಾಯ್ದರು.
“ಅವರ ಕ್ಷೇತ್ರದ ಜನರೇ ನೀವು ನಮಗೆ ಬೇಡ ಎಂದು ಪ್ರತಿಭಟಿಸಿ ಶೋಭಾ ಕರಂದ್ಲಾಜೆಯನ್ನು ಕ್ಷೇತ್ರದಿಂದ ಹೊರಗಟ್ಟಿದ್ದಾರೆ, ಅಂಥವರನ್ನು ತಂದು ಬೆಂಗಳೂರು ಉತ್ತರದಲ್ಲಿ ನಿಲ್ಲಿಸಿದ್ದಾರೆ, ಆದರೆ, ಈ ಕ್ಷೇತ್ರದ ಜನರು ಬುದ್ದಿವಂತರು, ಯಾರಿಗೂ ಬೇಡಾದ ದ ಬಿಜೆಪಿ ಅಭ್ಯರ್ಥಿಯನ್ನ ಮತ್ತೆ ಆಯ್ಕೆ ಮಾಡಲು ನಮ್ಮ ಜನ ದಡ್ಡರಲ್ಲ. ಮತದಾನದ ದಿನದಂದು ಕಾಂಗ್ರೆಸ್‌ನ ರಾಜೀವ್ ಗೌಡ ಅವರಿಗೆ ಮತ ಹಾಕುವ ಮೂಲಕ ಶೋಭಾ ಕರಂದ್ಲಾಜೆಯನ್ನು ಸೋಲಿಸಬೇಕು” ಎಂದು ಕರೆಕೊಟ್ಟರು.
“ಬಿಜೆಪಿಗೆ ಈ ಬಾರಿ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೇ ಅವರದೇ ಪಕ್ಷದ 12 ಎಂಪಿಗಳಿಗೆ ಈ ಬಾರಿ ಟಿಕೆಟ್ ನೀಡಿಲ್ಲ, ಸೋಲು ಭಯ ಅವರನ್ನು ಕಾಡುತ್ತಿದೆ. ಹೀಗಾಗಿಯೇ ಜನರು ಸಹ ಬಿಜೆಪಿಯನ್ನು ಸೋಲಿ ಕಾಂಗ್ರೆಸ್ ಕೈ ಹಿಡಿಬೇಕು. ರಾಜೀವ್ ಗೌಡ ಅವರು ಪ್ರೊಫೆಸರ್ ಆಗಿದ್ದವರು, ಅವರಿಗೆ ಮತದಾರರ ಮಿಡಿತ ಅರ್ಥವಾಗಲಿದೆ, ಹೀಗಾಗಿ ಎಲ್ಲರೂ ರಾಜೀವ್ ಗೌಡ ಅವರನ್ನೇ ಗೆಲ್ಲಿಸಿ” ಎಂದರು.