ಕನ್ನಡ ಚಲನ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ‘ಫೈರ್’ (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ ಸಂಸ್ಥೆ) ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿತು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್, ನಟಿ ಶೃತಿ ಹರಿಹರನ್ ನೇತೃತ್ವದ ಫೈರ್ ನಿಯೋಗ ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮನವಿಯಲ್ಲಿ ಏನಿದೆ?
“ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲೆಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರೆ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಂತರ, ಕರ್ನಾಟಕ ಸರ್ಕಾರವು ಕನ್ನಡ ಚಲನ ಚಿತ್ರೋದ್ಯಮದಲ್ಲಿನ ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಮನವಿಯಲ್ಲಿ ತಿಳಿಸಲಾಗಿದೆ.
“ವರದಿಯನ್ನು 3 ತಿಂಗಳುಗಳ ಒಳಗಾಗಿ ಸಂಪೂರ್ಣಗೊಳಿಸಬೇಕೆಂದು ‘ಫೈರ್’ ಸಂಸ್ಥೆಯು ವಿನಂತಿಸಿಕೊಂಡಿದೆ. ಅದರ ವಿವರಗಳನ್ನು ಮತ್ತು ಫಲಿತಾಂಶವನ್ನು ಶೀಘ್ರವಾಗಿ ಸಾರ್ವಜನಿಕಗೊಳಿಸಬೇಕೆಂದು ಬಯಸುತ್ತೇವೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಫೈರ್’ ಸಂಸ್ಥೆಯ ಪತ್ರಕ್ಕೆ ನೂರಾರು ನಟ, ನಟಿಯರು, ಪತ್ರಕರ್ತರು, ಹಿರಿಯ ಸಾಹಿತಿಗಳು ಬೆಂಬಲ ಸೂಚಿಸಿ ಸಹಿ ಮಾಡಿದ್ದಾರೆ. ಅದನ್ನು ಸಿಎಂ ಅವರಿಗೆ ನಿಯೋಗ ಸಲ್ಲಿಸಿದೆ.