ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ.
ಈವರೆಗೂ ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಗಳೂ ನೇಮಿಸಿರಲಿಲ್ಲ. ಈ ಕೊರತೆಯನ್ನು ಸಿಎಂ ಸಿದ್ದರಾಮಯ್ಯ ಅವರು ಈಡೇರಿಸಿದ್ದಾರೆ. ಈ ಮೂಲಕ ಆಯೇಷಾ ಅವರು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರಾಗಿರುವುದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ಸಮಾನತೆಗೂ ಮಾನ್ಯತೆ ಕೊಟ್ಟಂತಾಗಿದೆ.
ಜನಪರ ಹೋರಾಟದಿಂದಲೇ ಪತ್ರಿಕೋದ್ಯಮಕ್ಕೆ ಪ್ರವೇಶಿಸಿ ಸಾಮಾಜಿಕ ಕಾಳಜಿಗಳನ್ನಿಟ್ಟುಕೊಂಡು ವೃತ್ತಿಯಲ್ಲಿ ತೊಡಗಿರುವ ಚಿತ್ರದುರ್ಗದ ಅಹೋಬಳಪತಿ ಅವರ ಜೊತೆಗೆ ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕರಾದ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅವರನ್ನು ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿದ್ದು. ಇಲ್ಲೂ ಕೂಡ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಲಾಗಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ವೃತ್ತಿಪರತೆ ಕಾಪಾಡಿಕೊಂಡು ಬಂದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳಾ ಪ್ರತಿನಿಧಿಯೊಬ್ಬರು ಅಲಂಕರಿಸಿದ್ದಾರೆ.
ಹಿರಿಯ ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿಯಾಗಿರುವ ಆಯೇಷಾ ಖಾನಂ ಅವರು ದೂರದರ್ಶನ ದಕ್ಷಿಣ ಭಾರತದ ಮುಖ್ಯ ವರದಿಗಾರರಾಗಿದ್ದರು. ಜು.9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆಯೇಷಾ ಖಾನಂ ಅವರು 26 ವರ್ಷಗಳ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸಿದ್ದು, ಈ ಹಿಂದೆ ಏಷ್ಯನ್ ಏಜ್, ಆಜ್‌ತಕ್, ಸ್ಟಾರ್ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದಾರೆ. ಅವರು ಶ್ರೀಲಂಕಾ ಸಂಘರ್ಷ ಮತ್ತು 11 ರಾಜ್ಯಗಳ ಮತ್ತು 5 ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ವ್ಯಾಪಕವಾಗಿ ವರದಿ ಮಾಡಿದ್ದಾರೆ.