ಐಸಿಸಿ ಪುರುಷರ ಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ‘ನಂದಿನಿ’ ಲಾಂಛನ ಇರುವ ನೂತನ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ. ಹೊಸ ಜೆರ್ಸಿಯನ್ನು ತೊಟ್ಟಿರುವ ಆಟಗಾರರ ಚಿತ್ರವನ್ನು ಕ್ರಿಕೆಟ್ ಸ್ಕಾಟ್ಲೆಂಡ್ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿ, “ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ” ಎಂದು ತಿಳಿಸಿದ್ದಾರೆ.
“ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ” ಎಂದು ಹೇಳಿದ್ದಾರೆ.
“ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಜೆರ್ಸಿಯ ಬಲ ತೋಳಿನಲ್ಲಿ ನಂದಿನಿ ಲಾಂಛನವನ್ನು ಹಾಕಲಾಗಿದೆ. ನಂದಿನಿ ಎಂದು ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ.
“ಟಿ–20 ಅಭಿಯಾನದಲ್ಲಿ ಸ್ಕಾಟ್ಲೆಂಡ್ ಜೊತೆ ಪಾಲುದಾರಿಕೆ ಹೊಂದಿದ್ದು ನಮಗೆ ಸಂತೋಷವಾಗಿದೆ. ನಂದಿನಿಯು ಒಂದು ಬ್ರಾಂಡ್ ಆಗಿ ಶ್ರೇಷ್ಠತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಕಳೆದ ನಲವತ್ತು ವರ್ಷಗಳಲ್ಲಿ ನಾವು ಜಾಗತಿಕ ಬ್ರಾಂಡ್ ಆಗಿ ಬೆಳೆದಿದ್ದೇವೆ” ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಅವರ ಹೇಳಿಕೆಯನ್ನು ಕ್ರಿಕೆಟ್ ಸ್ಕಾಟ್ಲೆಂಡ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
“ನಂದಿನಿ ಜೊತೆ ಪಾಲುದಾರರಾಗಿದ್ದು ನಮಗೆ ಸಂತೋಷ ಉಂಟು ಮಾಡಿದೆ. ನಮ್ಮ ಪುರುಷರ ಕ್ರಿಕೆಟ್ ತಂಡಕ್ಕೆ ಸ್ಥಾಪಿತವಾದ ಬ್ರ್ಯಾಂಡ್ ಬೆಂಬಲ ನೀಡುತ್ತಿರುವುದೇ ಅದ್ಭುತ. ಅವರ ಬ್ರ್ಯಾಂಡ್ ಹಾಗೂ ಸ್ಕಾಟ್ಲೆಂಡ್ ಕ್ರಿಕೆಟ್ ಅನ್ನು ಪ್ರಚಾರ ಪಡಿಸಲು ನಂದಿನಿ ಜೊತೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್, ನಮೀಬಿಯಾ, ಒಮಾನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ನಂದಿನಿ ಲಾಂಛನ ಜೊತೆಗೆ ಹೆಮ್ಮೆಯ ಸ್ಕಾಟ್ಲೆಂಡ್ ಬಣ್ಣಗಳೂ ಇರಲಿವೆ” ಎಂದು ಕ್ರಿಕೆಟ್ ಸ್ಕಾಟ್ಲೆಂಡ್‌ನ ವಾಣಿಜ್ಯ ಕಾರ್ಯನಿರ್ವಾಹಕ ಕ್ಲಾರ್ ಡ್ರುಮಂಡ್ ಹೇಳಿದ್ದಾರೆ.