Homeಕರ್ನಾಟಕಮತ ಉಳಿಸಿ–ದೇಶ ಉಳಿಸಿ: SIR ವಿರುದ್ಧ ಹೋರಾಟಕ್ಕೆ ಇಂಡಿಯಾ ಮೈತ್ರಿಕೂಟ ಸಜ್ಜು

ಮತ ಉಳಿಸಿ–ದೇಶ ಉಳಿಸಿ: SIR ವಿರುದ್ಧ ಹೋರಾಟಕ್ಕೆ ಇಂಡಿಯಾ ಮೈತ್ರಿಕೂಟ ಸಜ್ಜು

ಮತದಾರರ ಹಕ್ಕುಗಳ ರಕ್ಷಣೆ, SIR ವಿರುದ್ಧ ಹೋರಾಟಕ್ಕೆ ರೂಪುರೇಷೆ; ಮೈತ್ರಿಕೂಟ ಬಲವರ್ಧನೆಗೆ ಚರ್ಚೆ

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಾಗರಿಕರ ಮತದಾನದ ಹಕ್ಕುಗಳ ರಕ್ಷಣೆಗಾಗಿ ‘ಮತ ಉಳಿಸಿ–ದೇಶ ಉಳಿಸಿ’ ಘೋಷವಾಕ್ಯದಡಿ ಇಂಡಿಯಾ ಮೈತ್ರಿಕೂಟದ ರಾಜ್ಯಮಟ್ಟದ ಮಹತ್ವದ ಸಭೆ ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಶಾಸಕರ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಎಲ್, ಎಐಎಫ್‌ಬಿ, ಸಮಾಜವಾದಿ ಪಕ್ಷ ಸೇರಿದಂತೆ ಮೈತ್ರಿಕೂಟದ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವ್ಯಕ್ತವಾಗಿರುವ ಆತಂಕಗಳ ಹಿನ್ನೆಲೆಯಲ್ಲಿ ಮತದಾನದ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟ ರೂಪಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ.

ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಅರ್ಹ ನಾಗರಿಕರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟವನ್ನು ಪರಿಣಾಮಕಾರಿಯಾಗಿ ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಜಂಟಿ ಹೋರಾಟಕ್ಕೆ ರೂಪುರೇಷೆ

ಸಂವಿಧಾನಾತ್ಮಕ ಸಂಸ್ಥೆಗಳ ಸ್ವಾಯತ್ತತೆ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮೈತ್ರಿಕೂಟದ ಪಕ್ಷಗಳ ನಡುವೆ ಸಮನ್ವಯ ಬಲಪಡಿಸುವ ಕುರಿತು ಸಮಾಲೋಚನೆ ನಡೆಯಲಿದೆ. ರಾಜ್ಯ, ಜಿಲ್ಲೆ ಹಾಗೂ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದು, ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಮುಂದಿನ ಹಂತದ ಜಂಟಿ ಹೋರಾಟಗಳಿಗೆ ರೂಪುರೇಷೆ ಸಿದ್ಧಪಡಿಸುವ ಬಗ್ಗೆಯೂ ಚರ್ಚಿಸಲಾಗುತ್ತದೆ.

ಮತದಾನದ ಹಕ್ಕಿನ ರಕ್ಷಣೆ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ವಿಚಾರವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕು ಹಾಗೂ ಸಂವಿಧಾನದ ಆಶಯಗಳನ್ನು ಉಳಿಸುವ ಜವಾಬ್ದಾರಿಯಾಗಿದೆ ಎಂಬ ನಿಲುವಿನೊಂದಿಗೆ ಇಂಡಿಯಾ ಮೈತ್ರಿಕೂಟವು ರಾಜ್ಯದಲ್ಲಿ ಒಗ್ಗಟ್ಟಿನ ಹೋರಾಟವನ್ನು ರೂಪಿಸಲು ಮುಂದಾಗಿದೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸಮಾನ ಮನಸ್ಕ ಶಕ್ತಿಗಳನ್ನು ಒಗ್ಗೂಡಿಸುವುದು ಹಾಗೂ ಮುಂದಿನ ಹೋರಾಟಕ್ಕೆ ಸ್ಪಷ್ಟ ದಿಕ್ಕು ನೀಡುವ ದೃಷ್ಟಿಯಿಂದ ಈ ಸಭೆ ಮಹತ್ವ ಪಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments