ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕಿರುವುದು ದುಃಖವಾಗಿದ್ದು. ಕನ್ನಡ ಹೋರಾಟಗಾರರಿಗೆ ನಾವು ಬೆಂಬಲಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ನವೀಕೃತ ಸಭಾಂಗಣ ಹಾಗೂ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಸರ್ಕಾರ ಸರಿಯಾಗಿ ಕಾನೂನು ಅನುಷ್ಠಾನ ಮಾಡದಿರುವುದಕ್ಕೆ ಕನ್ನಡಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ” ಎಂದರು.
“ನಾನು ಸಿಎಂ ಆಗಿದ್ದಾಗ ಸುಮಾರು ಎರಡು ಸಾವಿರ ಕನ್ನಡ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆದಿದ್ದೇವು. ನಾಮಪಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು” ಎಂದು ತಿಳಿಸಿದರು.
“ನಾವು ಕನ್ನಡದ ಅನುಷ್ಠಾನಕ್ಕಾಗಿ ವಿಧೇಯಕ ಜಾರಿಗೊಳಿಸಿದ್ದೇವು. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷಗಳಾಗಿವೆ. ಕನ್ನಡ ನಾಡಿನಲ್ಲಿ ಕನ್ನಡದ ಅನುಷ್ಟಾನಕ್ಕಾಗಿ ಕಾನೂನು ಮಾಡುವ ಅನಿವಾರ್ಯತೆ ಬಂದಿರುವುದು ಬೇಸರದ ಸಂಗತಿ. ಆದರೆ, ಈಗ ಕಾನೂನೂ ಮಾಡದಿದ್ದರೆ ನಮ್ಮ ಮಕ್ಕಳಿಗೆ ಕಷ್ಟವಾಗಲಿದೆ” ಎಂದು ಹೇಳಿದರು.
“ಕಾನೂನು ಅನುಷ್ಠಾನ ಮಾಡದಿದ್ದರೆ ಅದು ದುರ್ದೈವ. ಕನ್ನಡ ಅನುಷ್ಠಾನ ಆಗದಿದ್ದರಿಂದ ಕನ್ನಡ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವ ವ್ಯವಸ್ಥೆ ಇರುತ್ತದೆಯೋ ಅಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯುವುದಿಲ್ಲ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವುದಿಲ್ಲವೋ ಈ ರೀತಿಯ ಘಟನೆಗಳು ನಡೆಯುತ್ತವೆ” ಎಂದರು.
“ಕುವೆಂಪು ಅವರು ಅಪರೂಪದ ವ್ಯಕ್ತಿತ್ವ ಒಂದು ರೀತಿಯಲ್ಲಿ ಅವರು ಯುಗಪುರುಷರು ಅಂತ ಹೇಳಲು ಬಯಸುತ್ತೇನೆ. ಅವರನ್ನು ಆಳವಾಗಿ ನೋಡಿದಾಗ ಅತ್ಯಂತ ಮಾನವೀಯ ಗುಣಗಳಿರುವ ವ್ಯಕ್ತಿ. ವಿಸ್ತಾರವಾಗಿ ನೋಡಿದಾಗ ವಿಶ್ವ ಮಾನವರಾಗಿ ಕಾಣುತ್ತಾರೆ” ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಹಾಗೂ ಮತ್ತಿತರರು ಇದ್ದರು.