ನಮ್ಮ ದೇಶಕ್ಕೆ ಎದುರಾಗಿರುವ ಸಂಕಷ್ಟವನ್ನು ಎದುರಿಸಿ, ನಾವೆಲ್ಲ ಶಕ್ತಿ ತುಂಬಬೇಕು. ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ 139ನೇ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಗುರುವಾರ ಮಾತನಾಡಿದ ಅವರು, “ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಇತಿಹಾಸ, ಅಭಿವೃದ್ಧಿ ಪರ್ವ ಬರೆದದ್ದು ನಮ್ಮ ಹೆಗ್ಗಳಿಕೆ” ಎಂದರು.
“ಅನ್ಯರು ಏನು ಬೇಕಾದರೂ ಹೇಳಬಹುದು, ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಅದನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದದ್ದು ಕಾಂಗ್ರೆಸ್. ನಿರ್ಲಕ್ಷಿತ ಸಮುದಾಯಕ್ಕೆ ಧ್ವನಿ, ವಿದ್ಯಾಭ್ಯಾಸ, ಆರ್ಥಿಕ ಶಕ್ತಿ ಕೊಟ್ಟದ್ದು, ಅಣೆಕಟ್ಟುಗಳ ನಿರ್ಮಾಣ ಸೇರಿದಂತೆ ದೇಶವನ್ನು ಅಭಿವೃದ್ದಿಶೀಲವನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎಂದು ಹೇಳಿದರು.
“ಮಹಾತ್ಮ ಗಾಂಧಿ, ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಇಂದಿರಾಗಾಂಧಿ ಸೇರಿದಂತೆ ಸಾವಿರಾರು ಜನ ಈ ದೇಶಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು 60 ಸಾವಿರ ಕೋಟಿ ಹಣ ನೇರವಾಗಿ ಜನರಿಗೆ ಸೇರಿದೆ” ಎಂದರು.
“ಜ.10 ರಂದು ಕೇಂದ್ರ ನಾಯಕರು ಹಾಗೂ ರಾಜ್ಯದ ಎಲ್ಲ ಶಾಸಕರನ್ನು ಒಳಗೊಂಡು ಲೋಕಸಭೆ ಚುನಾವಣೆ ತಯಾರಿಗೆ ಸಭೆ ನಡೆಸಲಾಗುವುದು. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವುದರ ಬಗ್ಗೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗುವುದು. ಕಾರ್ಯಕರ್ತರು ಮನೆ, ಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಮಾಡಬೇಕು” ಎಂದು ಕರೆ ನೀಡಿದರು.
ಆರ್‌ಎಸ್ಎಸ್ ಗೂ ರಾಮಮಂದಿರಕ್ಕೂ ಏನೂ ಸಂಬಂಧವಿಲ್ಲ
“ಆರ್ ಎಸ್ಎಸ್ ಗೂ ರಾಮಮಂದಿರಕ್ಕೂ ಏನೂ ಸಂಬಂಧವಿಲ್ಲ. ಆದರೆ ಬಿಜೆಪಿ, ಆರ್ ಎಸ್ಎಸ್ ನವರನ್ನು ಬಳಸಿಕೊಂಡು ಮನೆ, ಮನೆಗೆ ತೆರಳಿ, ಅಕ್ಷತೆ ಕೊಟ್ಟು ಇಲ್ಲಿಂದಲೇ ರಾಮಮಂದಿರಕ್ಕೆ ನಮನ ಸಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದರೆ, ನಾವು ಜನರ ಬದುಕಿನ ಬಗ್ಗೆ ರಾಜಕಾರಣ ಮಾಡುತ್ತಿದ್ದೇವೆ. ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶ” ಎಂದರು.
“ಪ್ರತಿಯೊಂದು ವಾರ್ಡ್, ಪಂಚಾಯಿತಿಯಲ್ಲಿ ಆಶ್ರಯ ಸಮಿತಿ ಸೇರಿದಂತೆ ಅನೇಕ ಸಮಿತಿಗಳಿದ್ದು, ಇಲ್ಲೆಲ್ಲಾ ಕಾರ್ಯಕರ್ತರಿಗೆ ಶೀಘ್ರ ಸ್ಥಾನಗಳನ್ನು ಕಲ್ಪಿಸಲಾಗುವುದು. ಎರಡು ವರ್ಷಗಳಿಗೆ ಒಮ್ಮೆ ಬದಲಾವಣೆ ಮಾಡಬೇಕು ಎನ್ನುವ ಆಲೋಚನೆ ನಮ್ಮಲ್ಲಿದೆ. ಕಾರ್ಯಕರ್ತರ ಕೆಲಸಗಳ ಬಗ್ಗೆ ನಮಗೆ ಅರಿವಿದೆ, ಅವರಿಗೆ ನ್ಯಾಯ ಒದಗಿಸಲಾಗುವುದು. ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ. ಆದರೆ ಕಾರ್ಯಕರ್ತರ ತ್ಯಾಗವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಗ್ಯಾರಂಟಿ ಕವನ ವಾಚಿಸಿದ ಡಿಸಿಎಂ
ಐದನೇ ಗ್ಯಾರಂಟಿ ಯೋಜನೆ ಯುವನಿಧಿ ನೋಂದಣಿ ಉದ್ಘಾಟನಾ ಸಮಾರಂಭದಲ್ಲಿ ವಾಚಿಸಿ, ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದ್ದ ಕವನವನ್ನು ಡಿಸಿಎಂ ಮತ್ತೊಮ್ಮೆ ವಾಚಿಸಿದರು.
“ಐದು ಬೆರಳು ಸೇರಿ ಒಂದು ಮುಷ್ಠಿಯಾಯಿತು,
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು,
ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು,
ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು,
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು,
ಕರ್ನಾಟಕ ಸಮೃದ್ಧವಾಯಿತು,
ಕರ್ನಾಟಕ ಪ್ರಬುದ್ಧವಾಯಿತು” ಎಂದು ಕವನ ವಾಚಿಸಿದರು.