ಟೀ ಕುಡಿಯಲು ಬೇಕರಿ ಬಳಿ ಹೋಗಿದ್ದ ಕುಖ್ಯಾತ ರೌಡಿ ಸಹದೇವ್‌ನನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ ಎಂಟು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವಿನಯ್ ಸೇರಿದಂತೆ 8 ಮಂದಿ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಲಾಗಿದೆ.
ಗಣೇಶ ಹಬ್ಬದಿಂದಲೂ ಗಲಾಟೆ ಮಾಡಿಕೊಳ್ಳುತ್ತಿದ್ದ ಎರಡು ಗ್ಯಾಂಗ್ ಗಣೇಶ ಮೂರ್ತಿ ಬಿಡುವ ವಿಚಾರಕ್ಕೆ ಮತ್ತೆ ಗಲಾಟೆ ಮಾಡಿಕೊಂಡಿದ್ದು ಸಹದೇವ್, ವಿನಯ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ವಿನಯ್ ಮೇಲೆ ಸಹದೇವ್ ಹಲ್ಲೆ ಮಾಡಿದ್ದ. ಬಳಿಕ ಆರೋಪಿ ವಿನಯ್ ತಮ್ಮನ ಮೇಲೂ ಹಲ್ಲೆಗೈದಿದ್ದ. ಆಗ ಸಹದೇವ್ ಮತ್ತು ವಿನಯ್ ಗ್ಯಾಂಗ್ ಕೈಕೈ ಮಿಲಾಯಿಸಿದ್ದರು.
ಗಲಾಟೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.ಕಳೆದ ನವೆಂಬರ್ 8ರಂದು ರಾತ್ರಿ ಟೀ ಕುಡಿಯಲು ಬಂದಿದ್ದ ಸಹದೇವ್ ಜೊತೆ ಕ್ಷುಲ್ಲಕ ವಿಚಾರಕ್ಕೆ ವಿನಯ್ ಕಿರಿಕ್ ಮಾಡಿಕೊಂಡಿದ್ದ. ಮಾರಕಾಸ್ತ್ರಗಳಿಂದ ವಿನಯ್ ಗ್ಯಾಂಗ್ನಿಂದ ಸಹದೇವ್ ಮೇಲೆ ಹಲ್ಲೆ ನಡೆದಿತ್ತು. ಈ ಪರಿಣಾಮ ರೌಡಿಶೀಟರ್ ಸಹದೇವ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ.
ಕೊಲೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಪೂರವಾಡ ತಿಳಿಸಿದ್ದಾರೆ.