ಪಿಯುಸಿ ಓದುತ್ತಿರುವ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ಬರೆಯುವ ನಿಟ್ಟಿನಲ್ಲಿ ತರಬೇತಿ ಆರಂಭಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕಲಬುಗಿ ನಗರದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಚೇರಿಯಲ್ಲಿ ಶುಕ್ರವಾರ ಅಕ್ಷರ ಆವಿಷ್ಕಾರ ಅಭಿಯಾನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ 500 ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಆರಂಭಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ 137 ಪಬ್ಲಿಕ್ ಶಾಲೆಗಳು ಕಲ್ಯಾಣ ಕರ್ನಾಟಕದಲ್ಲಿಯೇ ಆರಂಭವಾಗಲಿವೆ. ಪಕ್ಷಭೇದ ಇಲ್ಲದೇ ಪ್ರತಿಯೊಬ್ಬ ಶಾಸಕರ ವ್ಯಾಪ್ತಿಯಲ್ಲಿ ಸರಾಸರಿ ನಾಲ್ಕು ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಈ ಶಾಲೆಗಳಲ್ಲಿ ದ್ವಿಭಾಷಾ ಕಲಿಕಾ ಮಾಧ್ಯಮ ಇರಲಿದೆ. ಇದರಿಂದಾಗಿ ಮಕ್ಕಳು ಎಲ್‌ಕೆಜಿಯಿಂದ ಪಿಯುಸಿವರೆಗೆ 14 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕಲಿಯಲು ಅವಕಾಶವಾಗಲಿದೆ” ಎಂದು ವಿವರಿಸಿದರು.
“ರಾಜ್ಯದಲ್ಲಿ ಈಗಾಗಲೇ 14 ಸಾವಿರ ಶಿಕ್ಷಕರ ನೇಮಕಾತಿಯಾಗಿದ್ದು, ಶೀಘ್ರವೇ ಮತ್ತೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಅನುಮೋದನೆ ದೊರೆತ ತಕ್ಷಣ ನೇಮಕ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಶಾಲೆ ನಿರ್ವಹಣೆಗೆ ₹ 40 ಸಾವಿರ ಶೌಚಾಲಯ ಸೇರಿದಂತೆ ಒಟ್ಟಾರೆ ಶಾಲೆಗಳ ನಿರ್ವಹಣೆಗೆ ವಾರ್ಷಿಕವಾಗಿ ನೀಡುತ್ತಿದ್ದ ನೆರವನ್ನು ₹ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ, ಶಾಲಾ ಶಿಕ್ಷಕರು, ಮಕ್ಕಳು ಪೊರಕೆ ಹಿಡಿದು ಶೌಚಾಲಯ ಸ್ವಚ್ಛ ಮಾಡುವುದು ತಪ್ಪಲಿದೆ. ಅನುದಾನವನ್ನು ಶಿಕ್ಷಕರು ಲೇಖನ ಸಾಮಗ್ರಿ ಖರೀದಿಗೂ ಬಳಸಿಕೊಳ್ಳಬಹುದು” ಎಂದು ತಿಳಿಸಿದರು.
ಶಿಕ್ಷಣಕ್ಕೆ ₹652 ಕೋಟಿ ಮೀಸಲು
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವುದು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕೆಕೆಆರ್‌ಡಿಬಿಯು ತನ್ನ ಅನುದಾನದ ಶೇ 25ರಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ₹ 2610 ಕೋಟಿಯಲ್ಲಿ ಶಿಕ್ಷಣಕ್ಕೆ ₹ 652 ಕೋಟಿ ವಿನಿಯೋಗಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದರು.
ಶಾಸಕ ಎಂ ವೈ ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶಬಾಬು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ತರರು ಇದ್ದರು.