ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು ನಗರದ ಮೈಕೊ ಲೇಔಟ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದ ಹಾರೋಹಳ್ಳಿ ತಾಲ್ಲೂಕಿನ ದ್ಯಾವಸಂದ್ರದ ಮಂಜುಶ್ರೀ (27) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮಂಜುಶ್ರೀ ಅವರು ಇತ್ತೀಚೆಗೆ ಶಿವಾಜಿನಗರ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದರು. ಶುಕ್ರವಾರ ದ್ಯಾವಸಂದ್ರ ಗ್ರಾಮಕ್ಕೆ ಬಂದಿದ್ದ ಅವರು, ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುಶ್ರೀ ಅವರದು ಬಡ ಕುಟುಂಬವಾಗಿದ್ದು, ಉತ್ತಮ ಬದುಕನ್ನು ಅರಸಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದರು. ಮನೆಗೆ ಆಸರೆಯಾಗಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಊರಿನ ಮನೆಗೆ ಬಂದು ಪ್ರಾಣ ಕಳೆದುಕೊಂಡಿದ್ದಾರೆ.
ಮೃದು ಸ್ವಭಾವದ ಈಕೆ ಯಾವುದೋ ಕಾರಣದಿಂದ ನೊಂದು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಹೇಳಲಾಗಿದೆ. ಸಾವಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.