Homeಕರ್ನಾಟಕರಾಮೇಶ್ವರಂ ಕೆಫೆ ಸ್ಫೋಟ | ಬಾಂಬರ್‌ ಬಳ್ಳಾರಿಯಲ್ಲಿ ಅಡಗಿಕೊಂಡಿರುವ ಶಂಕೆ

ರಾಮೇಶ್ವರಂ ಕೆಫೆ ಸ್ಫೋಟ | ಬಾಂಬರ್‌ ಬಳ್ಳಾರಿಯಲ್ಲಿ ಅಡಗಿಕೊಂಡಿರುವ ಶಂಕೆ

ವೈಟ್‌ಫೀಲ್ಡ್‌ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆಸಿದ ಪಾತಕಿ ಬಾಂಬರ್‌ ಅಡಗಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.

ಬಳ್ಳಾರಿ ಮೂಲದ ಶಂಕಿತ ಉಗ್ರ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಿನಾಜ್ ಅಲಿಯಾಸ್‌ ಸುಲೈಮಾನ್‌ ಬಾಂಬ್ ಸ್ಫೋಟದ ರೂವಾರಿ ಇರಬಹುದು ಎಂಬ ಅನುಮಾನ ಇದರಿಂದ ದಟ್ಟವಾಗುತ್ತಿದೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲೇ ಸದ್ಯಕ್ಕೆ ಬೀಡು ಬಿಟ್ಟಿವೆ. ಕೆಫೆ ಬಾಂಬರ್‌ ಬೆಂಗಳೂರಿನಿಂದ ಬಸ್ಸು ಹತ್ತಿ ಬಳ್ಳಾರಿಗೆ ಹೋಗಿರುವುದು ಸ್ಪಷ್ಟವಾಗಿದೆ. ಆದರೆ ಅಲ್ಲಿಂದ ಬೇರೆಲ್ಲಿಗೂ ಹೋದ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಅಂದು ರಾತ್ರಿ 9 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಈತ ಕಾಣಿಸಿಕೊಂಡಿದ್ದ. ಆ ಬಳಿಕ ಎಲ್ಲಿಯೂ ಆರೋಪಿಯ ಚಲನವಲನದ ಬಗ್ಗೆ ಸುಳಿವು ಇಲ್ಲದಿರುವುದರಿಂದ, ಆತ ಬಳ್ಳಾರಿಯಲ್ಲೇ ಅಡಗಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಹೀಗಾಗಿ, ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಸುಲೈಮಾನ್‌ ಗ್ಯಾಂಗ್‌ನಿಂದಲೇ ಕೃತ್ಯ ನಡೆದಿರಬಹುದು ಎಂಬ ದಟ್ಟ ಅನುಮಾನ ಮೂಡಿದೆ. ಆತ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಆತನನ್ನು ವಿಚಾರಣೆಗಾಗಿ ನಿನ್ನೆ ಎನ್‌ಐಎ ತಂಡ ವಶಕ್ಕೆ ಪಡೆದಿತ್ತು. ಸದ್ಯ ನಾಲ್ಕು ದಿನಗಳ ಕಾಲ ಸುಲೈಮಾನ್‌ನನ್ನು ವಶಕ್ಕೆ ಪಡೆದಿರುವ ಎನ್‌ಐಎ, ಆತನ ಸುತ್ತ ತನಿಖೆಯ ಪಟ್ಟುಗಳನ್ನು ಬಿಗಿ ಮಾಡಿದೆ.

ರಾಜ್ಯಾದ್ಯಂತ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಿದ್ದ ಮಿನಾಜ್‌ ಅಲಿಯಾಸ್‌ ಸುಲೈಮಾನ್‌ನನ್ನು ಎನ್‌ಐಎ ತಂಡ ಡಿಸೆಂಬರ್‌ನಲ್ಲಿ ಹೆಡೆಮುರಿ ಕಟ್ಟಿ ಬಂಧಿಸಿ ತಂದಿತ್ತು. ಐಎಸ್ಐಎಸ್ ಉಗ್ರ ಸಂಘಟನೆಯ ಭಾರತದ ಮಾಡ್ಯೂಲ್ ಮೇಲೆ ದೇಶದಾದ್ಯಂತ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ಕಳೆದ ಡಿಸೆಂಬರ್‌ನಲ್ಲಿ ಎನ್‌ಐಎ ದಾಳಿ ನಡೆಸಿತ್ತು. ಈ ವೇಳೆ ಬಳ್ಳಾರಿಯಲ್ಲಿ, ಸುಧಾರಿತ ಸ್ಪೋಟಕಗಳನ್ನು ಬಳಸಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮಿನಾಝ್‌ ಅಲಿಯಾಸ್‌ ಸುಲೈಮಾನ್‌ ಮತ್ತು ಸೈಯ್ಯದ್ ಸಮೀರ್ ಎಂಬವರನ್ನು ಬಂಧಿಸಿತ್ತು.

ಈ ಉಗ್ರ ಸಂಘಟನೆಯ ಮಾಡ್ಯೂಲ್‌ ನೇತೃತ್ವವನ್ನು ಬಳ್ಳಾರಿ ಮೂಲದ ಮಿನಾ‌ಜ್‌ ಅಲಿಯಾಸ್ ಎಂಡಿ ಸುಲೈಮಾನ್ ವಹಿಸಿದ್ದ. ಇವರು ಐಸಿಸ್‌ನ ಭಯೋತ್ಪಾದನೆ ಸಂಬಂಧಿತ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಎನ್ಐಎ ದಾಳಿಯಲ್ಲಿ ಸ್ಫೋಟಕ ಕಚ್ಚಾ ಸಾಮಗ್ರಿಗಳಾದ ಸಲ್ಫರ್, ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಗನ್ ಪೌಡರ್, ಸಕ್ಕರೆ ಮತ್ತು ಎಥೆನಾಲ್ ಮತ್ತು ಹರಿತವಾದ ಆಯುಧಗಳು, ನಗದು, ಸ್ಮಾರ್ಟ್‌ಪೋನ್‌ಗಳು, ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಗಳು ಸ್ಫೋಟಕ ಕಚ್ಚಾ ವಸ್ತುಗಳನ್ನು ಐಇಡಿ ತಯಾರಿಕೆಗೆ ಬಳಸಿ ಅದನ್ನು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಬಳಸಲು ಯೋಜಿಸಿದ್ದರು. ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಈ ಸುಧಾರಿತ ಸ್ಫೋಟಕಗಳ ಮಾದರಿಗೂ ಸಾಮ್ಯವಿದೆ ಎಂದು ತಿಳಿದುಬಂದಿದೆ. ಹೀಗಾಗಿ, ಸುಲೈಮಾನ್ ಟೀಂನಿಂದ ತರಬೇತಿ ಪಡೆದ ಉಗ್ರನೇ ಬಾಂಬ್ ಬ್ಲಾಸ್ಟ್ ನಡೆಸಿರಬಹುದು ಎಂದು ಶಂಕಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments