ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭ ಹಾರೈಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ರಾಮ ರಾಜ್ಯ ಕನಸು, ಗ್ಯಾರಂಟಿಗಳಿಂದ ನನಸಾಗುತ್ತಿದೆ” ಎಂದು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿ ಸಂದೇಶ ಪ್ರಕಟಿಸಿದ್ದಾರೆ.
“ರಾಮರಾಜ್ಯದ ನಿರ್ಮಾಣ, ನಮ್ಮ ಕನಸು. ಅದನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೊಳಿಸಿದ ಐದು ಗ್ಯಾರಂಟಿಗಳು ಇಂದು ಯಶಸ್ವಿಯಾಗಿವೆ. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು” ಎಂದು ತಿಳಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ತೆರಳದೇ ಇರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಯಾರೂ ಆಹ್ವಾನ ಇದ್ದರೂ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ತೆರಳದೇ ಇರಲು ನಿರ್ಧರಿಸಿದ್ದಾರೆ.
ರಾಮ ಮಂದಿರ ಉದ್ಘಾಟನೆ ಬಿಜೆಪಿ ಕಾರ್ಯಕ್ರಮ ಎಂದೂ ಕಾಂಗ್ರೆಸ್ನ ಕೆಲವು ನಾಯಕರು ಟೀಕಿಸಿದ್ದಾರೆ. ಈ ಮಧ್ಯೆ, ರಾಮ ಮಂದಿರಕ್ಕೆ ದೇಣಿಗೆ ನೀಡಿದವರಲ್ಲಿ ಅನೇಕ ಕಾಂಗ್ರೆಸ್ ನಾಯಕರೂ ಇದ್ದಾರೆ ಎಂಬುದು ಗಮನಾರ್ಹ. ಈ ಎಲ್ಲ ಬೆಳವಣಿಗೆಗಳ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಶುಭ ಕೋರಿದ್ದಾರೆ.