ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಲಹೆ ಮೇರೆಗೆ ಎನ್ಡಿಎ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, “ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಬಿಜೆಪಿಯಲ್ಲಿ ಹೆಚ್ಚುವರಿ ಮತಗಳಿವೆ. ವಿಪಕ್ಷದ ಮತಗಳು ನಷ್ಟವಾಗಬಾರದು. ಹೀಗಾಗಿ ಹೆಚ್ಚುವರಿ ವೋಟ್ ಕುಪೇಂದ್ರಗೆ ವರ್ಗಾವಣೆ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಈ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ” ಎಂದರು.
ಎನ್ಡಿಎ ಮೈತ್ರಿಯ ಎರಡನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ರಾಜ್ಯಸಭಾ ಚುನಾವಣಾ ಅಖಾಡ ಮತ್ತಷ್ಟು ರಂಗೇರಲಿದೆ. ಇದರಿಂದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ನಾಯಕರಿಗೆ ಸೃಷ್ಟಿಯಾಗಿದೆ.
ಕಾಂಗ್ರೆಸ್ನಲ್ಲಿರುವ ಅಸಮಾಧಾನವನ್ನೇ ಬಂಡಾವಳ ಮಾಡಿಕೊಂಡು ಕೈ ಶಾಸಕರಿಂದ ಅಡ್ಡ ಮತದಾನ ಮಾಡಿಸಲು ಬಿಜೆಪಿ, ಜೆಡಿಎಸ್ ಪ್ಲಾನ್ ಮಾಡಿಕೊಂಡು ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಧಾನಸಭೆ ಬಲಾಬಲದ ಪ್ರಕಾರ ಕಾಂಗ್ರೆಸ್ ಮೂರು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲಲು ಸುಲಭ ಅವಕಾಶ ಇದೆ. ಕಾಂಗ್ರೆಸ್ ಸಂಖ್ಯಾಬಲ 135. ಇದರಿಂದ ಮೂರು ಅಭ್ಯರ್ಥಿಗಳನ್ನು ಆರಾಮಾಗಿ ಗೆಲ್ಲಿಸಬಹುದಾಗಿದೆ. ಬಿಜೆಪಿ ಸಂಖ್ಯಾಬಲ 66 ಆಗಿದ್ದು, ಇದರಿಂದ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಬಹುದು. ಆದರೆ, ಬಿಜೆಪಿಯ ಉಳಿದ 21 ಮತಗಳು ಜೆಡಿಎಸ್ಗೆ ವರ್ಗಾವಣೆ ಆದರೆ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಕೇವಲ 5 ಮತಗಳು ಬೇಕಾಗುತ್ತವೆ. ನಾಲ್ಕು ಜನ ಪಕ್ಷೇತರ ಶಾಸಕರ ಬೆಂಬಲ ಪಡೆಯಲು ಬಿಜೆಪಿ, ಜೆಡಿಎಸ್ ಮೈತ್ರಿ ತಂತ್ರಗಾರಿಕೆ ಹೂಡಿವೆ. ಹಾಗೆಯೇ ಐದು ಕಾಂಗ್ರೆಸ್ ಶಾಸಕರಿಂದ ಅಡ್ಡ ಮತದಾನ ಮಾಡಿಸಲು ಕಮಲದಳ ನಾಯಕರ ಕಸರತ್ತು ಜೋರಾಗಿದೆ ಎನ್ನಲಾಗಿದೆ.