ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದಿಂದ ರಾಜ್ಯದೆಲ್ಲೆಡೆ ಬಡ ಕುಟುಂಬಗಳಿಗಾಗಿ ಪ್ರಧಾನ ಮಂತ್ರಿ ಅವಾಸ್ (ನಗರ ) ಯೋಜನೆಯಡಿ ನಿರ್ಮಿಸಲಾಗುತ್ತಿರುವ 52,189 ಮನೆಗಳ ಕಾಮಾಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ವಾದ ಅನುದಾನ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ 52189 ಮನೆಗಳ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ವಂತಿಗೆ 2013 ಕೋಟಿ ರೂ. ಪಾವತಿ ಆಗಿಲ್ಲ, ಹೀಗಾಗಿ ಕಾಮಗಾರಿ ಪೂರ್ಣ ಗೊಳಿಸಲು 2168 ಕೋಟಿ ರೂ. ಅಗತ್ಯ ಇರುವ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿ ಹಂತ ಹಂತ ವಾಗಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸಲು ಅಗತ್ಯ ಬೀಳುವ ಅನುದಾನ ಕುರಿತು ಸಂಪುಟ ಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
“2013 ರಿಂದ ಇದುವರೆಗೆ 52, 189 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಫಲಾನುಭವಿಗಳ ವಂತಿಗೆ 2013 ಕೋಟಿ ರೂ. ಬರಬೇಕಿದ್ದು, 134 ಕೋಟಿ ರೂ. ಮಾತ್ರ ಪಾವತಿ ಆಗಿದೆ. ಫಲಾನುಭವಿಗಳು ಬಡವರಾಗಿದ್ದು, 4 ಲಕ್ಷ ಪಾವತಿ ಕಷ್ಟ ಆಗಿದೆ. ಬ್ಯಾಂಕ್ ಗಳಿಂದಲೂ ಸಾಲ ಸಿಗುತ್ತಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೊಂಡಂತೆ ಫಲಾನುಭವಿಗಳು ಒಂದು ಲಕ್ಷ ರೂ. ಪಾವತಿಸಿ ಉಳಿದ ಹಣ ಸರ್ಕಾರ ಭರಿಸಿದರೆ ಮಾತ್ರ ಯೋಜನೆ ಪೂರ್ಣಗೊಂಡು ಬಡವರಿಗೆ ಮನೆ ನೀಡಲು ಸಾಧ್ಯ ವಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಗಿ ಸಂಪುಟದ ಮುಂದೆ ಪ್ರಸ್ತಾವನೆ ತರುವಂತೆ ಸೂಚಿಸಿದ್ದಾರೆ” ಎಂದರು.
“100 ಕೋಟಿ ರೂ. ಹಣ ನೀಡಿದರೆ ಫೆಬ್ರವರಿ ವೇಳೆಗೆ 5 ಸಾವಿರ ಮನೆ ನೀಡಬಹುದು. ಅದೇ ರೀತಿ ಹಂತ ಹಂತವಾಗಿ 1879 ಕೋಟಿ ರೂ. ಫಲಾನು ಭವಿಗಳ ವಂತಿಗೆ ಮೊತ್ತ ಹಾಗೂ ಮೂಲ ಸೌಕರ್ಯ ಕ್ಕೆ 289 ಕೋಟಿ ರೂ. ಒಟ್ಟು 2168 ಕೋಟಿ ರೂ. ನೀಡಿದರೆ ಮುಂದಿನ ಡಿಸೆಂಬರ್ ವೇಳೆಗೆ ಎಲ್ಲ ಮನೆಗಳ ಕಾಮಗಾರಿ ಪೂರ್ಣ ಗೊಳಿಸಿ ಮನೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಲಾಗಿದೆ” ಎಂದು ಹೇಳಿದರು.
“ಯೋಜನೆಯಡಿಯಲ್ಲಿ ಪ್ರತಿ ಮನೆಗೆ 7.50 ಲಕ್ಷ ರೂ. ವೆಚ್ಚ ಆಗಲಿದ್ದು 3.50 ಲಕ್ಷ ರೂ. ಸಬ್ಸಿಡಿ ಸಿಗಲಿದ್ದು 4ಲಕ್ಷ ರೂ. ಫಲಾನುಭವಿ ಕಟ್ಟಬೇಕಿತ್ತು. ಇದೀಗ ಫಲಾನುಭವಿ ಒಂದು ಲಕ್ಷ ರೂ. ಕಟ್ಟಿದರೆ 3 ಲಕ್ಷ ರೂ. ಸರ್ಕಾರವೇ ಭರಿಸಲಿದೆ. ಇದೇ ಸಂದರ್ಭದಲ್ಲಿ ಸಂಪುಟದಲ್ಲಿ ಒಪ್ಪಿಗೆ ನೀಡಿರುವ ಕೊಳಗೇರಿ ಅಭಿವೃದ್ಧಿ ಮಂಡಳಿಯ 1.82 ಲಕ್ಷ ಮನೆಗಳನ್ನು ಪೂರ್ಣ ಗೊಳಿಸುವ ಸಂಬಂಧ 500 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು” ಎಂದು ಹೇಳಿದರು.
“ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಗೆ 1000 ಸಾವಿರ ಕೋಟಿ ರೂ. ಪ್ರಸ್ತಾವನೆ ಸಿದ್ದಪಡಿಸಲು, 6.4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮೊತ್ತ 60 ಕೋಟಿ ರೂ. ಪೈಕಿ ಇಲಾಖೆ ಅನುದಾನದಲ್ಲಿ 40 ಕೋಟಿ ರೂ. ಬಳಕೆಗೆ ಸಭೆ ಸೂಚನೆ ನೀಡಲಾಯಿತು” ಎಂದು ವಿವರಿಸಿದರು.
ಫಲಾನುಭವಿಗಳು ಒಂದು ಲಕ್ಷ ರೂ. ಮಾತ್ರ ಪಾವತಿ
ಇತ್ತೀಚಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಡಿ ನಿರ್ಮಾಣ ಆಗುತ್ತಿರುವ 1.82 ಲಕ್ಷ ಮನೆ ನಿರ್ಮಾಣಕ್ಕೆ ಫಲಾನುಭವಿ ವಂತಿಗೆ ಸರ್ಕಾರದಿದಲೇ ಭರಿಸುವ ತೀರ್ಮಾನ ಸಂಪುಟದಲ್ಲಿ ಕೈಗೊಳ್ಳಲಾಗಿತ್ತು. ಅದೇ ರೀತಿ ಇದೀಗ ರಾಜೀವ್ ಗಾಂಧಿ ವಸತಿ ನಿಗಮದಿಂದ 2103 ರಿಂದ ಬಾಕಿ ಇದ್ದ 52 ಸಾವಿರ ಮನೆ ನಿರ್ಮಾಣ ಕ್ಕೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಪಾವತಿ ಮಾಡಲಿದ್ದು ಫಲಾನುಭವಿಗಳು ಒಂದು ಲಕ್ಷ ರೂ. ಮಾತ್ರ ಪಾವತಿಸಬೇಕಾಗುತ್ತದೆ.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಗಳಾದ ನಸೀರ್ ಅಹಮದ್, ಗೋವಿಂದ ರಾಜು, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅತೀಕ್, ಹಣಕಾಸು ಇಲಾಖೆ ಕಾರ್ಯದರ್ಶಿ ಜಾಫರ್,
ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಲ್ಪಸಂಖ್ಯಾತ ರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಎರಡೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.