ಒಕ್ಕಲಿಗ ಸಮುದಾಯದ ಬಿಜೆಪಿ ಹಿರಿಯ ನಾಯಕ ಆರ್ ಅಶೋಕ್ ಈಗ ಪ್ರತಿಪಕ್ಷ ಸಾಮ್ರಾಟ್ ನಾಯಕರಾಗಿದ್ದಾರೆ! ಒಂದೇ ವಾರದ ಅಂತರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕರ ಆಯ್ಕೆ ಮಾಡುವ ಮೂಲಕ ಬಿಜೆಪಿ ಪ್ರಬಲ ಜಾತಿಗಳ ಸಮೀಕರಣಕ್ಕೆ ಮುಂದಡಿ ಇಟ್ಟಿದೆ.
ವಿಧಾನಸಭಾ ಚುನಾವಣೆ ಕಳೆದು ಆರು ತಿಂಗಳ ಬಳಿಕ ರಾಷ್ಟ್ರೀಯ ಪಕ್ಷ ಬಿಜೆಪಿ ಕೊನೆಗೂ ಹಲವು ಲೆಕ್ಕಾಚಾರದಡಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿದೆ. ಈ ಮೂಲಕ ಲೋಕಸಭಾ ಚುನಾವಣೆ ಸಮರಕ್ಕೆ ಬಿಜೆಪಿ ಸಿದ್ಧವಾದಂತೆ ಕಾಣುತ್ತಿದೆ.
ಒಕ್ಕಲಿಗ ಸಮುದಾಯದ ಬಿಜೆಪಿ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಚಿವ ಹಾಗೂ ಬೆಂಗಳೂರಿನ ಪದ್ಮನಾಭನಗರದ ಹಾಲಿ ಶಾಸಕ ಆರ್ ಅಶೋಕ್ ಅವರಿಗೆ ವಿಪಕ್ಷ ನಾಯಕನ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಅಶೋಕ್ ಈಗ ಪ್ರತಿಪಕ್ಷ ಸಾಮ್ರಾಟ್ ನಾಯಕರಾಗಿದ್ದಾರೆ!
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಆರ್ ಅಶೋಕ್ ಅವರ ಹೆಸರು ಘೋಷಣೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆರ್ ಅಶೋಕ್ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸೂಚಿಸಿದರು. ಮಾಜಿ ಸಚಿವ ಸುನೀಲ್ ಕುಮಾರ್ ಅದನ್ನು ಅನುಮೋದಿಸಿದರು. ಉಳಿದವರು ಅದಕ್ಕೆ ಸಹಮತ ವ್ಯಕ್ತಪಡಿಸಿದರು.
ಸಾಕಷ್ಟು ಟೀಕೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷದಲ್ಲಿದ್ದುಕೊಂಡು ಹೀನಾಯವಾಗಿ ಸೋತ ಬಿಜೆಪಿಯನ್ನು ಹೈಕಮಾಂಡ್ ಆರು ತಿಂಗಳುಗಳ ಕಾಲ ತಿರುಗಿ ಕೂಡ ನೋಡಲಿಲ್ಲ. ಹೊಸ ಸರ್ಕಾರ ರಚನೆಯಾಗಿ, ಮಳೆಗಾಲದ ಅಧಿವೇಶನ ಆರಂಭವಾದರೂ ಕೂಡ ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ಕಿಂಚತ್ತೂ ತಲೆಕಡೆಸಿಕೊಳ್ಳಲಿಲ್ಲ. ಪರಿಣಾಮ ಕರ್ನಾಟಕ ರಾಜಕೀಯ ಚರಿತ್ರೆಯಲ್ಲೇ ಪ್ರತಿಪಕ್ಷದ ನಾಯಕನಿಲ್ಲದೇ ಅಧಿವೇಶನವೊಂದು ಮುಗಿದುಹೋಯಿತು. ಬಿಜೆಪಿ ಪಾಲಿಗೆ ಇದು ಕಪ್ಪು ಚುಕ್ಕೆಯಾಗಿಯೇ ಉಳಿಯಿತು.
ಪ್ರತಿಪಕ್ಷದ ನಾಯಕನ ಆಯ್ಕೆ ವಿಳಂಬವನ್ನೇ ಅಸ್ತ್ರ ಮಾಡಿಕೊಂಡ ಆಡಳಿತ ಪಕ್ಷದ ನಾಯಕರು ಬಿಜೆಪಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡರು. ಸ್ವಪಕ್ಷದಲ್ಲೇ ಅಸಮಾಧಾನಗಳು ಸ್ಫೋಟಗೊಂಡವು. ಜನಸಾಮಾನ್ಯರಿಂದಲೂ ತೀವ್ರ ಟೀಕೆಗೆ ಬಿಜೆಪಿ ಗುರಿಯಾಗಬೇಕಾಯಿತು.
ಎಚ್ಚೆತ್ತುಕೊಂಡ ಬಿಜೆಪಿ
ಡಿಸೆಂಬರ್ 4ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಮತ್ತೆ ಪ್ರತಿಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ ಇಲ್ಲದೇ ಅಧಿವೇಶನಕ್ಕೆ ಹೋದರೆ ಮತ್ತೊಮ್ಮೆ ಮರ್ಯಾದೆಗೇಡು ಆಗಬೇಕಾಗುತ್ತದೆ ಎಂಬ ಎಚ್ಚರಿಕೆಯಿಂದ ಹಾಗೂ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ವಾರದ ಅಂತರದಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.
ಕಳೆದ ಶುಕ್ರವಾರ (ನ.10) ಲಿಂಗಾಯತ ಸಮುದಾಯದ ಯುವ ಪ್ರಭಾವಿ ನಾಯಕ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದರೆ, ಈ ಶುಕ್ರವಾರ (ನ.17) ಒಕ್ಕಲಿಕ ಸಮುದಾಯದ ಪ್ರಬಲ ನಾಯಕ ಆರ್ ಅಶೋಕನನ್ನು ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದೆ. ಈ ಮೂಲಕ ಬಿಜೆಪಿ ಲಿಂಗಾಯತ ಮತ್ತು ಒಕ್ಕಲಿಗ ಎಂಬ ಪ್ರಬಲ ಜಾತಿ ಸಮೀಕರಣಕ್ಕೆ ಮುಂದಡಿ ಇಟ್ಟಿದೆ.
ಮುನಿಸಿಕೊಂಡಿದ್ದ ಲಿಂಗಾಯತ ಸಮುದಾಯ
ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಅಂತ ಲಿಂಗಾಯತ ಸಮುದಾಯ ಗಂಭೀರ ಆರೋಪ ಮಾಡಿತ್ತು. ವಿಪಕ್ಷಗಳೂ ಕೂಡ ಬಿಎಸ್‌ವೈ ಅವರನ್ನು ಬಿಜೆಪಿ ನಿರ್ಲಕ್ಷ್ಯಿಸುತ್ತಿದೆ ಅಂತ ವಾಗ್ದಾಳಿ ನಡೆಸಿತ್ತು. ಅವೆಲ್ಲವುಗಳ ಪರಿಣಾಮ 2023ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿತ್ತು.
ಇದನ್ನು ಸರಿದೂಗಿಸಲು ಬಿ ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಲಿಂಗಾಯತರನ್ನು ಮರಳಿ ಸೆಳೆಯುವ ತಂತ್ರಕ್ಕೆ ಹೈಕಮಾಂಡ್ ಮುಂದಾಗಿದೆ. ಇತ್ತ ರಾಜ್ಯದ ಮತ್ತೊಂದು ದೊಡ್ಡ ಸಮುದಾಯವಾದ ಒಕ್ಕಲಿಗರ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲಾಗುತ್ತಿದ್ದವು. ಇದನ್ನು ಹಿಡಿದಿಟ್ಟುಕೊಳ್ಳಲು ಒಕ್ಕಲಿಗ ನಾಯಕ ಆರ್ ಅಶೋಕ್‌ಗೆ ವಿಪಕ್ಷ ನಾಯಕನ ಪಟ್ಟ ಕಟ್ಟಿದೆ.
ಯಡಿಯೂರಪ್ಪ ತಂತ್ರಗಾರಿಕೆ
ಬಿ ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿತ್ತು ಎನ್ನುವ ವಿಶ್ಲೇಷಣೆಗಳು ಕೇಳಿಬಂದವು. ಇದೀಗ ಆರ್ ಅಶೋಕ್ ಆಯ್ಕೆ ಹಿಂದೆಯೂ ಯಡಿಯೂರಪ್ಪ ತಂತ್ರಗಾರಿಕೆ ಇದೆ ಎನ್ನಲಾಗಿದೆ. ವಿಪಕ್ಷ ನಾಯಕನ ಸ್ಥಾನಕ್ಕೆ ಅಶೋಕ್ ಅವರನ್ನೇ ಆಯ್ಕೆ ಮಾಡುವಂತೆ ಯಡಿಯೂರಪ್ಪ ಸಲಹೆ ನೀಡಿದ್ದರು ಎನ್ನುವ ಮಾತುಗಳು ವ್ಯಕ್ತವಾಗುತ್ತಿವೆ. ಈ ಮೂಲಕ ರಾಜ್ಯ ಬಿಜೆಪಿ ಮತ್ತೆ ಯಡಿಯೂರಪ್ಪ ಅವರ ಹಿಡಿತಕ್ಕೆ ಮರಳಿದಂತೆ ಕಾಣುತ್ತಿದೆ.
ಆರ್ ಅಶೋಕ್ ನಡೆದು ಬಂದ ದಾರಿ
ಏಳು ಬಾರಿ ಬಿಜೆಪಿ ಶಾಸಕರಾಗಿದ್ದ ಅಶೋಕ್ ಅವರು, 2012ರ ಜುಲೈನಿಂದ 2013ರ ಮೇರವರೆಗೆ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ಹಿರಿಯ ನಾಯಕರಿಗೆ ಸಂಪುಟ ಸದಸ್ಯರಾಗಿ ಐವರು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಸಚಿವರಾಗಿ ಗೃಹ, ಕಂದಾಯ, ಪೌರಾಡಳಿತ, ಸಾರಿಗೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಂತಾದ ವಿವಿಧ ಖಾತೆಗಳನ್ನು ನಿರ್ವಹಿಸಿದ್ದ ಅನುಭವವಿದೆ.
ಆರ್ ಅಶೋಕ್ ಮುಂದಿರುವ ಸವಾಲು
ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವುದರಿಂದ ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟಬೇಕಿದೆ. ಅಸಮಾಧಾನಗೊಂಡಿರುವ ಹಿರಿಯ ಶಾಸಕರ ಮನವೊಲಿಸಬೇಕಿದೆ. ಲೋಕಸಭೆ ಚುನಾವಣೆ ಬಿಜೆಪಿಗೆ ದೊಡ್ಡ ಸವಾಲಾಗಿದ್ದು ಕಳೆದ ಬಾರಿ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಅಷ್ಟೇ ಸ್ಥಾನಗಳನ್ನು ಉಳಿಸಿಕೊಳ್ಳುತ್ತಾ ಎಂಬುದು ದೊಡ್ಡ ಸವಾಲು.
ವಿಪಕ್ಷ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಶುರುವಾದ ಕೂಡಲೇ ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ, ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಗೈರಾಗುವ ಮೂಲಕ ಗಮನ ಸೆಳೆದಿದ್ದಾರೆ. ಇವರೆಲ್ಲರನ್ನು ಹೇಗೆ ವಿಶ್ವಾಸಕ್ಕೆ ತಗೆದುಕೊಳ್ಳುತ್ತಾರೆ ಎಂಬುದು ಮುಂದಿರುವ ಪ್ರಶ್ನೆ.