ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸಿ ಟಿ ರವಿ ಅವರು ನೀಡಿರುವ ಅಂಡಮಾನ್ ಜೈಲು ಭೇಟಿ ಆಫರ್ ಅನ್ನು ಸಚಿವ ಪ್ರಿಯಾಂಕ್ ಖರ್ಗೆ ಸ್ವೀಕರಿಸಿದ್ದಾರೆ.
“ಸಿ ಟಿ ರವಿ ಅವರು ಫಂಡ್ ಮಾಡೋದರಿಂದ ನಾನು ಹೋಗಿ ಸಾವರ್ಕರ್ ಇದ್ದ ಸೆಲ್ಲ್ಯೂಲರ್ ಜೈಲಿಗೆ ಹೋಗಿ ನೋಡಿಕೊಂಡು ಬರ್ತೀನಿ. ಆದರೆ ಇವಾಗ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಬರ ಮುಗಿದ ಮೇಲೆ ಜುಲೈ ತಿಂಗಳಲ್ಲಿ ಭೇಟಿ ಮಾಡುತ್ತೇವೆ. ಆದರೆ ಅಲ್ಲಿಯವರಗೆ ಈ ಆಫರ್ ಇರುತ್ತಾ ಎಂದು ಪ್ರಶ್ನಿಸಿದ್ದಾರೆ.
“ನನ್ನ ಸಿದ್ದಾಂತ ನನಗೆ ಕ್ಲಿಯರ್ ಇದೆ. ಬಸವ ತತ್ವ, ಅಂಬೇಡ್ಕರ್ ತತ್ವದ ಸಿದ್ದಾಂತ ನನ್ನದು. ಬಿಜೆಪಿಗೆ ನಾನು 3-4 ಪ್ರಶ್ನೆ ಕೇಳಿದ್ದೇನೆ. ಸಾವರ್ಕರ್ ಬ್ರಿಟಿಷರ ಪಿಂಚಣಿಗೆ ಅರ್ಜಿ ಹಾಕಿರಲಿಲ್ಲವಾ? ವೀರ ಅಂತ ಬಿರುದು ಸಾವರ್ಕರ್ ಗೆ ಯಾರು ಕೊಟ್ಟಿದ್ದು? ದೇಶ ವಿಭಜನೆ ಮಾಡೋಕೆ ಮೊದಲು ಪ್ರಸ್ತಾಪ ಮಾಡಿದ್ದು ಯಾರು ಅಂತ ಬಜೆಪಿ ಅವರು ಹೇಳಲಿ” ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಹಾಕಲಾಗಿರುವ ಸಾವರ್ಕರ್ ಫೋಟೋ ವನ್ನು ತೆಗೆಯಲು ನನಗೆ ಅವಕಾಶ ಸಿಕ್ಕರೆ ಈಗಲೇ ತೆರವು ಮಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಸಚಿವರ ಈ ಹೇಳಿಕೆಗೆ ವಿವಾದಕ್ಕೆ ಕಾರಣವಾಗಿತ್ತು. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ ಟಿ ರವಿ ಟ್ವೀಟ್ ಮಾಡಿದ್ದರು.
ಸಿ ಟಿ ರವಿ ಟ್ವೀಟ್ ಏನು?
ಆತ್ಮೀಯರಾದ ಪ್ರಿಯಾಂಕ್ ಖರ್ಗೆ ಅವರೇ, ತಾಯಿ ಭಾರತಿಯ ಮಡಿಲಿನಲ್ಲಿ ಜನಿಸಿದ ಮಹಾನ್ ರಾಷ್ಟ್ರೀಯವಾದಿ, ಕರಿನೀರ ವೀರ, ಹುತಾತ್ಮ ವೀರ್ ಸಾವರ್ಕರ್ ಅವರು, ಬ್ರಿಟಿಷರಿಂದ ಕಠಿಣ ಕಾರಾಗ್ರಹ ಶಿಕ್ಷೆಗೊಳಪಡಿಸುವ ತೀರ್ಪಿನಂತೆ, ಘೋರ ಕರಿನೀರಿನ ಶಿಕ್ಷೆ ಅನುಭವಿಸಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯುಲರ್ ಜೈಲಿಗೆ ಭೇಟಿ ನೀಡಲು ನಿಮ್ಮನ್ನು ಆಹ್ವಾನಿಸುತ್ತೇನೆ. ಅಂದ ಹಾಗೆ ನಿಮ್ಮ ಪ್ರವಾಸದ ಸಂಪೂರ್ಣ ಖರ್ಚುವೆಚ್ಚ ನಾನೇ ಭರಿಸುತ್ತೇನೆ.
ಅತ್ತ ನಿಮ್ಮ ನೆಚ್ಚಿನ ನೆಹರು, ಶಿಕ್ಷೆಯ ನೆಪದಲ್ಲಿ, ಬ್ರಿಟಿಷರ ಜೈಲುಗಳಲ್ಲಿ ಐಷಾರಾಮಿ ಉಪಚಾರ ಪಡೆಯುತ್ತಿರುವಾಗ, ಇತ್ತ ಅಂಡಮಾನಿನ ಜೈಲಿನಲ್ಲಿ ವೀರ್ ಸಾವರ್ಕರ್ ಯಾವ ರೀತಿಯ ನೋವು ಮತ್ತು ಸಂಕಟವನ್ನು ಅನುಭವಿಸಿದರು ಎಂಬ ಸಣ್ಣ ಅನುಭೂತಿ ನಿಮಗಾಗಬಹುದು.
ಸೆಲ್ಲ್ಯುಲರ್ ಜೈಲಿನ ಆವರಣದಲ್ಲೇ “ಸಾವರ್ಕರ್ ಮತ್ತು ನೆಹರು ಇವರಿಬ್ಬರಲ್ಲಿ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಯಾರು?” ಎಂಬುದರ ಕುರಿತು ಬಹಿರಂಗ ಚರ್ಚೆ ನಡೆಸಲು ನಾನು ನಿಮಗೆ ಸವಾಲು ಹಾಕುತ್ತೇನೆ. ವಿನಾಯಕ ದಾಮೋದರ್ ಸಾವರ್ಕರ್ ಅವರ ಫೋಟೋವನ್ನು ವಿಧಾನಸಭೆ ಅಥವಾ ಪರಿಷತ್ತಿನಿಂದ ತೆಗೆಯುವ ದುಸ್ಸಾಹಸ ಮಾಡಿದರೆ ಇಡೀ ರಾಜ್ಯದ ಜನತೆಯಾದಿಯಾಗಿ ನಾವೆಲ್ಲರೂ ಉಗ್ರ ಪ್ರತಿಭಟನೆ ನಡೆಸುತ್ತೇವೆ.
ಇಂದು ನೀವು ಅಧಿಕಾರದಲ್ಲಿರಬಹುದು, ನೆನಪಿಡಿ, ಮುಂದೆ ನಾವು ಅಧಿಕಾರಕ್ಕೆ ಬಂದಾಗ ನೆಹರೂ ಅವರ ಭಾವಚಿತ್ರ ವಿಧಾನಸೌಧದಲ್ಲಿ ಹೇಗೆ ಇರುತ್ತದೆ ನೋಡೋಣ. ನೆನಪಿಡಿ, ಪರಿವಾರವಾದದ ಬಲದಿಂದ ಬೆಳೆದಂತಹ ಹೊಗಳುಭಟ್ಟರು ಬೇಕು ಎಂದಾಗ ಭಾವಚಿತ್ರ ಇಡಲಿಕ್ಕೆ, ಬೇಡ ಅಂದಾಗ ತೆಗಯಲಿಕ್ಕೆ , ವೀರ ಸಾವರ್ಕರ್ ಅವರು ನಿಮ್ಮ ಹಾಗೆ ಅಥವಾ ನೆಹರು ಅವರ ಹಾಗೆ ವಂಶವಾದದಿಂದ ಬೆಳೆದವರಲ್ಲ.