Homeಕರ್ನಾಟಕತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ | ಕೆಪಿಸಿಎಲ್‌ನಿಂದ ಮಹತ್ವದ ಸಾಧನೆ: ಗೌರವ್ ಗುಪ್ತಾ

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ | ಕೆಪಿಸಿಎಲ್‌ನಿಂದ ಮಹತ್ವದ ಸಾಧನೆ: ಗೌರವ್ ಗುಪ್ತಾ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಬೆಂಗಳೂರಿನಲ್ಲಿ ಖಾಸಗಿಯವರಿಗೂ ಸಾಧ್ಯವಾಗದ ಕಾರ್ಯವನ್ನು ಮಾಡಿದೆ ಎಂದು ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.

ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಸಿಎಲ್ ನ 55ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಸಂಬಂಧ ಏಳೆಂಟು ಖಾಸಗಿ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿತ್ತಾದರೂ ಯೋಜನೆ ಜಾರಿಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ, ಕೆಪಿಸಿಎಲ್ ಈ ಕಾರ್ಯದಲ್ಲಿ ಯಶಸ್ವಿಯಾಗಿದೆ. ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ಉತ್ಪಾದನೆ ಪ್ರಾಯೋಗಿಕವಾಗಿ ಆರಂಭವಾಗಿದೆ. ಈ ಸಾಧನೆಯ ಯಶಸ್ಸು ಕೆಪಿಸಿಎಲ್ ನ ಇಂಜಿನಿಯರ್ ಗಳು ಮತ್ತು ಸಿಬ್ಬಂದಿಗೆ ಸಲ್ಲಬೇಕು” ಎಂದರು.

“ಪ್ರಸ್ತುತ ರಾಜ್ಯದಲ್ಲಿ 32 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇದನ್ನು ಮುಂದಿನ ಏಳು ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ಗೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಯವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಪಿಸಿಎಲ್ ವತಿಯಿಂದ ಜಲ, ಉಷ್ಣ, ಪವನ, ಸೌರ ವಿದ್ಯುತ್ ಸೇರಿದಂತೆ ವಿವಿಧ ಮೂಲಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಅವರು ತಿಳಿಸಿದರು.

“ವಿದ್ಯುತ್ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಒಡಿಶಾದಲ್ಲಿ ಮಂದಾಕಿನಿ ಕ್ಯಾಪ್ಟಿವ್ ಕಲ್ಲಿದ್ದಲು ಘಟಕ ಆರಂಭಿಸಲಾಗುತ್ತಿದೆ. ಛತ್ತೀಸ್ ಘಡದಲ್ಲಿ ಉಷ್ಣ ವಿದ್ಯುತ್ ಸ್ಥಾವರ, ಶರಾವತಿಯಲ್ಲಿ ಪಂಪ್ಡ್ ಸ್ಟೋರೇಜ್ ಘಟಕ ಸೇರಿದಂತೆ ಭವಿಷ್ಯದಲ್ಲಿ ಸಾಕಷ್ಟು ಯೋಜನೆಗಳನ್ನುಹಮ್ಮಿಕೊಂಡು ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ” ಎಂದರು.

ದಾಖಲೆಯ ವಿದ್ಯುತ್ ಉತ್ಪಾದನೆ

“ಈ ಬಾರಿ ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಸಮಸ್ಯೆಯಾದಾಗ ಉಷ್ಣ ವಿದ್ಯುತ್ ಸ್ಥಾವರಗಳು ದಾಖಲೆಯ ವಿದ್ಯುತ್ ಉತ್ಪಾದನೆ ಮಾಡಿ ಸಮಸ್ಯೆ ಬಗೆಹರಿಸಲು ಸಹಕರಿಸಿದವು. ಹಳೆಯ ಘಟಕಗಳಲ್ಲೂ ಹೆಚ್ಚು ಉತ್ಪಾದನೆ ಮಾಡುವ ಮೂಲಕ ದೇಶದಲ್ಲೇ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳು ಮೆಚ್ಚುಗೆ ಗಳಿಸಿದವು. ಅದೇ ರೀತಿ ಇದೀಗ ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್, ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಹೀಗೆ ನಾನಾ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಕೆಪಿಸಿಎಲ್ ನ ಈ ಬಾರಿಯ ಸಂಸ್ಥಾಪನಾ ದಿನಾಚರಣೆ ವಿಶೇಷವಾಗಿದೆ ಎಂದು” ಸಂತಸ ವ್ಯಕ್ತಪಡಿಸಿದರು.

“ಕೆಪಿಸಿಎಲ್ ಸಿಬ್ಬಂದಿ ಕೊರತೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಭಡ್ತಿ ವಿಚಾರದಲ್ಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗುವುದು. ನಿಗಮಕ್ಕಾಗಿ ಕೆಲಸ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರ್ಕಾರ ಎಲ್ಲಾ ರೀತಿಯಲ್ಲೂ ಸ್ಪಂದಿಸಲಿದೆ” ಎಂದು ಭರವಸೆ ನೀಡಿದರು.

ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಯನ್ನು ಗೌರವಿಸಲಾಯಿತು. ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೆಪಿಸಿಎಲ್ ನ ಸಿಬ್ಬಂದಿ ಮಕ್ಕಳನ್ನು ಬೆಳ್ಳಿ ಪದಕ ನೀಡಿ ಪುರಸ್ಕರಿಸಲಾಯಿತು. ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್. ನಾಗರಾಜ್, ತಾಂತ್ರಿಕ ನಿರ್ದೇಶಕ ಸಿ.ಎಂ.ದಿವಾಕರ್, ಮಾನವ ಸಂಪನ್ಮೂಲ ನಿರ್ದೇಶಕ ಸಿ.ನಾಗರಾಜ್, ಮುಖ್ಯ ಜಾಗೃತ ಅಧಿಕಾರಿ ಶಿವಕುಮಾರ್ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments