ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ 2023ನೇ ಸಾಲಿನ ಸ್ಟಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ.
ಪವರ್ ಆಫ್ ಅಟಾರ್ನಿ, ಡೀಡ್ಸ್ ಆ್ಯಂಡ್ ಅಫಿಡವಿಟ್ ಹಾಗೂ ಇತರ ಕಾನೂನು ದಾಖಲೆಗಳಿಗೆ ಸಂಬಂಧಿಸಿದ ಮುದ್ರಾಂಕ ಶುಲ್ಕ ಹೆಚ್ಚಳವಾಗಲಿದೆ. ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳು ರಾಜ್ಯ ಸರ್ಕಾರಕ್ಕೆ ನಿರ್ಣಾಯಕ ಆದಾಯದ ಮಾರ್ಗಗಳಾಗಿವೆ. ಇವುಗಳ ಮೂಲಕ ಈ ಹಣಕಾಸು ವರ್ಷದಲ್ಲಿ 25,000 ರೂ. ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಎಷ್ಟಾಗಲಿದೆ ಪರಿಷ್ಕೃತ ಮುದ್ರಾಂಕ ಶುಲ್ಕ?
ಮಸೂದೆ ಪ್ರಕಾರ, ದತ್ತು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕ 500 ರಿಂದ 1,000 ರೂ.ಗೆ ಏರಿಕೆಯಾಗಲಿದೆ. ಸದ್ಯ 20 ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಹೊಂದಿರುವ ಅಫಿಡವಿಟ್ಗಳಿಗೆ ಮುಂದೆ 100 ರೂಪಾಯಿ ವರೆಗೆ ಮುದ್ರಾಂಕ ಶುಲ್ಕ ಇರಲಿದೆ.
ಪವರ್ ಆಫ್ ಅಟಾರ್ನಿ ಮೇಲಿನ ಮುದ್ರಾಂಕ ಶುಲ್ಕವನ್ನು 100 ರೂ.ನಿಂದ 500 ರೂ.ಗೆ ಹೆಚ್ಚಿಸಲಾಗುತ್ತದೆ. ಐದಕ್ಕಿಂತ ಹೆಚ್ಚು ಮಂದಿ, ಆದರೆ 10 ಕ್ಕಿಂತ ಕಡಿಮೆ ವ್ಯಕ್ತಿಗಳು ಜಂಟಿಯಾಗಿ ಪವರ್ ಆಫ್ ಅಟಾರ್ನಿ ನೀಡುವುದಾದರೆ ಅದರ ಮೇಲಿನ ಮುದ್ರಾಂಕ ಶುಲ್ಕ 200 ರೂ.ನಿಂದ 1,000 ರೂ.ಗೆ ಹೆಚ್ಚಳವಾಗಲಿದೆ.
ನಗರ ಪ್ರದೇಶಗಳಲ್ಲಿರುವ ಆಸ್ತಿ ವಿಭಜನಾ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಪ್ರತಿ ಷೇರಿಗೆ 1,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ನಗರ ಮಿತಿಯಿಂದ ಹೊರಗಿರುವ ಆಸ್ತಿಗಳಿಗೆ, ಪ್ರಸ್ತುತ 500 ರೂ. ಬದಲಾಗಿ ಪ್ರತಿ ಷೇರಿಗೆ 3,000 ರೂ. ಮಾಡಲು ಪ್ರಸ್ತಾವಿಸಲಾಗಿದೆ. ಕೃಷಿ ಆಸ್ತಿಗಳನ್ನು ವಿಭಜಿಸಲು ಪ್ರತಿ ಷೇರಿಗೆ 250 ರೂ. ಬದಲಾಗಿ 1,000 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ವಿಚ್ಛೇದನ ಪತ್ರಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಕೂಡ 100 ರಿಂದ 500 ರೂ.ಗೆ ಹೆಚ್ಚಾಗಲಿದೆ. ಪ್ರಮಾಣೀಕೃತ ಪ್ರತಿಗಳಿಗೆ, ಸ್ಟ್ಯಾಂಪ್ ಸುಂಕವನ್ನು 5 ರಿಂದ 20 ಕ್ಕೆ ಹೆಚ್ಚಿಸಲು ವಿಧೇಯಕದಲ್ಲಿದೆ. ಅಲ್ಲದೇ ಟ್ರಸ್ಟ್‌ಗಳನ್ನು ನೋಂದಾಯಿಸುವುದು ಸಹ ದುಬಾರಿಯಾಗಲಿದೆ. ಕಂಪನಿಗಳ ವಿಲೀನ ಮತ್ತಿತರ ಪ್ರಕ್ರಿಯೆಗಳ ಶುಲ್ಕದಲ್ಲೂ ಸಹ ಹೆಚ್ಚಳವಾಗಲಿದೆ.