ನಾವು ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಅವರು ಉಳಿಯುವಂತೆ ಮಾಡಿದ್ದೇವೆ ಎಂದು ಸಂಸದ ಡಿ ಕೆ ಸುರೇಶ್ ತಿರುಗೇಟು ನೀಡಿದ್ದಾರೆ.
“ಕಾಂಗ್ರೆಸ್ಸಿನಂತೆ ಬಿಜೆಪಿಯವರು ಕುತ್ತಿಗೆ ಕೊಯ್ಯುವ ಕೆಲಸ ಮಾಡಿಲ್ಲ” ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಮಾಧ್ಯಮದವರು ಕೇಳಿದಾಗ ಸುರೇಶ್ ಅವರು ಸದಾಶಿವನಗರ ನಿವಾಸದ ಬಳಿ ಬುಧವಾರ ಪ್ರತಿಕ್ರಿಯಿಸಿದರು.
“ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿ, ರಾಜ್ಯದ ಸಿಎಂ ಮಾಡಿದ್ದೇವೆ. ಈ ದೇಶ ಗುರುತಿಸುವಂತಹ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಕಾಂಗ್ರೆಸ್ ಪ್ರಧಾನಿ ಮಾಡದೇ ಹೋಗಿದ್ದರೆ ಅವರನ್ನು ಈ ದೇಶ ನೆನಪಿಸಿಕೊಳ್ಳುತ್ತಿರಲಿಲ್ಲ. ರಾಜ್ಯದ ಮೂವತ್ತು ಸಿಎಂಗಳಲ್ಲಿ ಕುಮಾರಸ್ವಾಮಿ ಅವರು ಒಬ್ಬರಾಗುತ್ತಿರಲಿಲ್ಲ” ಎಂದರು.
“ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ನಾನು ಹೆಚ್ಚು ಉತ್ತರ ನೀಡಲು ಹೋಗುವುದಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆ ಸೇರಿರುವ ಅವರು ಆದಷ್ಟು ಬೇಗ ಗುಣಮುಖರಾಗಲಿ. ರಾಜಕಾರಣದಲ್ಲಿ ಎದುರಾಳಿಗಳು ಬಲಿಷ್ಟವಾಗಿದ್ದಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಅದಕ್ಕೆ ಅವರು ಮೊದಲು ಗುಣಮುಖರಾಗಲಿ” ಎಂದು ಹೇಳಿದರು.
ದೇವೇಗೌಡರು ಈ ಹಿಂದೆ ಆಡಿದ್ದ ಮಾತುಗಳನ್ನು ಜನರಿಗೆ ತೋರಿಸಿ
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಂತೆ ಇದೆಯಲ್ಲ ಎಂದು ಕೇಳಿದಾಗ, “ಜಾತ್ಯಾತೀತ ತತ್ವಗಳ ಬಗ್ಗೆ ನಾನು ಮಾತನಾಡಿದರೆ ಪ್ರಚಾರ ಆಗುವುದಿಲ್ಲ. ನಿಮಗೆ ಬೇಕಾದ ಹೇಳಿಕೆಗಳನ್ನು ನಾನು ಕೊಡಲು ಆಗುವುದಿಲ್ಲ. ಮಾಜಿ ಪ್ರಧಾನಿಗಳು ಹಿಂದೆ ಹೇಳಿದ್ದ, ‘ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆʼ, ʼಮೋದಿ ಗೆದ್ದರೆ ದೇಶ ಬಿಟ್ಟು ಹೋಗುತ್ತೇನೆʼ, ʼರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಅವಶ್ಯಕತೆಯಿಲ್ಲ, ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆʼ – ಎಂಬೆಲ್ಲ ಹೇಳಿಕೆಗಳನ್ನು ಜನರಿಗೆ ತೋರಿಸಿ” ಎಂದರು.
ಹನುಮಾನ್ ಚಾಲೀಸಾ ವಿವಾದದ ಬಗ್ಗೆ ಕೇಳಿದಾಗ “ಮಾಧ್ಯಮದವರು ಪ್ರಚಾರ ನೀಡುತ್ತಾರೆ ಎಂದು ಭಾವಿಸಿ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ಸಣ್ಣ ವಿಚಾರಗಳನ್ನು ಅನವಶ್ಯಕವಾಗಿ ದೊಡ್ಡದು ಮಾಡುವ ಪ್ರವೃತ್ತಿಯನ್ನು ಬಿಜೆಪಿಗೆ ಯಾರೂ ಹೇಳಿಕೊಡಬೇಕಾಗಿಲ್ಲ” ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ
ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ಇತರೆಡೆಯಿಂದ ಬಂದು ಬಾಂಬ್ ಇಡುತ್ತಾರೆ ಎನ್ನುವ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಉನ್ನತ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಬಳಿ ಇವೆ. ಭಯೋತ್ಪಾದಕರು ಎಲ್ಲೆಲ್ಲಿ ಇದ್ದಾರೆ ಎನ್ನುವುದು ಅವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುವುದು ಬಿಟ್ಟು ಕೇಂದ್ರ ಸರ್ಕಾರದ ಬಳಿ ಪ್ರಶ್ನೆ ಮಾಡಲಿ” ಎಂದರು.