ಪಕ್ಷದಲ್ಲಿನ ನನ್ನ ಅಸಮಾಧಾನ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ನಾಯಕ ಜೆಸಿ ಮಾಧುಸ್ವಾಮಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಅವರು ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.
ತುಮಕೂರಿನಲ್ಲಿ ನನಗೆ ಅನ್ಯಾಯ ಆಗಿದೆ. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಿ ಅಂತಾ ನಾನು ಕೇಳಿಲ್ಲ. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ಸ್ಥಳೀಯರಿಗೆ ಕೊಡಿ, ಅದನ್ನ ತಪ್ಪಿಸಬೇಡಿ ಅಂತಾ ಕೇಳಿದ್ದೇವೆ. ಐದಾರು ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ವೋಟ್ ಹಾಕಬೇಕಿದೆ. ನಂಗೆ ಎಂಪಿ ನಿಲ್ಲು ಅಂದೋರು ಯಡಿಯೂರಪ್ಪನವರೇ. ಎರಡು ಮೂರು ಸಾರಿ ನಾನು ಬೇಡ ಅಂದಾಗ ನಿಲ್ಲು ಎಂದವರು ಯಡಿಯೂರಪ್ಪ. ಇದು ಬಹಿರಂಗ ಆಗಬೇಕು ಅಷ್ಟೇ” ಎಂದು ಮಾಧುಸ್ವಾಮಿ ಆಗ್ರಹಿಸಿದರು.
“ನಾವು ದುಡ್ಡಲ್ಲಿ ರಾಜಕಾರಣ ಮಾಡಿದವರಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ಅವರ ಬಳಿಯೂ ಎಲ್ಲ ವಿಚಾರ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಗಿರುತ್ತೇನೆ” ಎಂದರು.
ಸೋಮಣ್ಣ ಮೇಲೆ ಅಸಮಾಧಾನವಿಲ್ಲ
ವೈಯಕ್ತಿವಾಗಿ ವಿ ಸೋಮಣ್ಣ ಮೇಲೆ ಅಸಮಾಧಾನವಿಲ್ಲ. ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರೂ ತೊಂದರೆ ಇರಲಿಲ್ಲ.ಅವರು ರಾಜ್ಯಸಭೆಗೆ ಹೋಗುತ್ತಾರೆ ಎಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ, ಅವರು ಜಾತಿ ಇದೆ ಎಂಬ ಕಾರಣಕ್ಕೆ ಎಲ್ಲಾ ಕಡೆ ಹೋಗುತ್ತಿದ್ದರೆ ಸ್ಥಳೀಯರ ಸ್ಥಿತಿ ಏನು” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ
“ನಾನು ಕಾಂಗ್ರೆಸ್ ಸೇರಲಿದ್ದೇನೆ ಎಂದು ಎಲ್ಲೋ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಕಾಂಗ್ರೆಸ್ ನ ಬಿ ಫಾರಂ ಮಾಧುಸ್ವಾಮಿಗೆ ಸಿಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಬಿ ಫಾರಂ ಬದಲಾಯಿಸಿ ಕಾಂಗ್ರೆಸ್ ಪಕ್ಷದವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸಲಾರೆ. ಬಿಜೆಪಿಯವರು ಕರೆದರೂ ಚುನಾವಣೆಗೆ ನಿಲ್ಲುವುದಿಲ್ಲ. ಯಾರೋ ನೋಡಿ ಬಂದ ಹೆಣ್ಣನ್ನು ನಾನೇಕೆ ಮದುವೆಯಾಗಲಿ” ಎಂದು ಮಾಧುಸ್ವಾಮಿ ಮಾರ್ಮಿಕವಾಗಿ ಹೇಳಿದರು.
“ನಾನು ಯಾರಿಗೂ ಕಾಂಗ್ರೆಸ್ಗೆ ಸೇರುತ್ತೇನೆ, ಬಂದೇ ಬರುತ್ತೇನೆ ಎಂದು ಹೇಳಿಲ್ಲ. ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೇನೆ. ಹಾಗಂತ ಬರಲ್ಲ ಎಂದೂ ಎಲ್ಲೂ ಹೇಳಲ್ಲ. ಬಿಜೆಪಿಯಿಂದ ಅಶೋಕ್ ಬಂದಿದ್ದು ನಿಜ. ಜಯರಾಮ್ರನ್ನು ಕರೆದುಕೊಂಡು ಗೋಪಾಲಯ್ಯ ಅವರೆಲ್ಲ ಬಂದು ಹೋದರು. ನನಗೆ ಅಸಮಾಧಾನ ಇರುವುದು ಯಡಿಯೂರಪ್ಪನವರ ಮೇಲೆ. ಯಡಿಯೂರಪ್ಪನವರೇ ಉತ್ತರ ಕೊಡಬೇಕು ಎಂದು ಹೇಳಿ ಕಳಿಸಿರುವೆ” ಎಂದು ತಿಳಿಸಿದರು.