ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ (ಏ. 26) ನಡೆಯಲಿರುವ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ. ಮತದಾನ ಮುಕ್ತಾಯಕ್ಕೆ 48 ಗಂಟೆ ಮುನ್ನ ಇಂದು ಸಂಜೆ 6 ಗಂಟೆಗೆ ಪ್ರಚಾರಕ್ಕೆ ತೆರೆ ಬಿದ್ದಿದೆ.
ಗಮನ ಸೆಳೆದಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ರೋಡ್ ಶೋ ಮೂಲಕ ಪ್ರಚಾರ ಮುಗಿಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಹೋದರ ಡಿ ಕೆ ಸುರೇಶ್ ಪರ ಕನಕಪುರದಲ್ಲಿ ಅಬ್ಬರದ ಭಾಷಣ ಮಾಡಿ, “ನಮ್ಮ ಜನ ನಮಗೆ ಬಹಳ ಪ್ರೀತಿ ವಿಶ್ವಾಸ ತೋರಿದ್ದಾರೆ. ಅವರ ಆಶೀರ್ವಾದದಿಂದ ಇಡೀ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇಡೀ ಊರಿಗೆ ಊರೇ ಒಗ್ಗಟ್ಟಿನಿಂದ ಆಶೀರ್ವಾದ ಮಾಡುತ್ತಿದೆ. ಜನರಿಗೆ ನನ್ನ ಮೇಲೆ ನಂಬಿಕೆ ಇದೆ. ಕ್ಷೇತ್ರ ಹಿಂದೆ ಹೇಗಿತ್ತು, ಈಗ ಯಾವ ರೀತಿ ಬದಲಾವಣೆ ಮಾಡಿದ್ದೇವೆ ಎಂಬುದು ನರಿಗೆ ಗೊತ್ತಿದೆ. ನಾವು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿಲ್ಲ” ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಕುಟುಕಿ ಮಾತನಾಡಿದರು.
ಇನ್ನು ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪರವಾಗಿ ಬೃಹತ್ ಜನಸಮಾವೇಶವನ್ನು ಉದ್ಘಾಟಿಸಿ, ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಮುಖಂಡರುಗಳನ್ನು ಸ್ವಾಗತಿಸಿದ ಬಳಿಕ ಮಾತನಾಡಿ, “ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಸೋತಿದ್ದರಿಂದ ಖರ್ಗೆಯವರಿಗೆ ಹೆಚ್ಚು ನಷ್ಟ ಆಗಲಿಲ್ಲ. ಇವರ ಸೋಲಿನಿಂದ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಬಹಳ ದೊಡ್ಡ ನಷ್ಟವಾಗಿದೆ. ಈ ಬಾರಿ ಮತ್ತೆ ತಪ್ಪಾಗಬಾರದು. ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ” ಎಂದು ಕರೆ ನೀಡಿದರು.
ಗೆದ್ದರೆ ಡಾ ಮಂಜುನಾಥ್‌ಗೆ ಸಚಿವ ಸ್ಥಾನ?
“ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಅವರಿಗೆ ಎಲೆಕ್ಷನ್ ಬಳಿಕ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ. ಮಂಜುನಾಥ್ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ಸುಕರಾಗಿದ್ದಾರೆ” ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸುಳಿವು ನೀಡಿದರು.
ಮಾವೋವಾದಿ ದೇಶ ಮಾಡಲು ಹೊರಟಿದೆ
“ರಾಹುಲ್ ಗಾಂಧಿ ಭಾಷಣ, ಕಾಂಗ್ರೆಸ್ ಮ್ಯಾನಿಫ್ಯಾಸ್ಟೋ ದೇಶವನ್ನು ಮಾವೋವಾದಿ ದೇಶ ಮಾಡಲು ಹೊರಟಿದೆ. ಜನರ ಬಳಿ ಎರಡು ಬೈಕ್, ಮನೆ ಇದ್ದರೆ ಒಂದು ಕಸಿದುಕೊಳ್ಳುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
“ಕಾಂಗ್ರೆಸ್ ಪಾರ್ಟಿ ದೇಶಕ್ಕೆ ವೆಲ್ತ್ ಕ್ರಿಯೇಟ್ ಮಾಡುವವರ ವಿರುದ್ಧ ಹೊರಟಿದೆ. ಮಾವೋವಾದಿ ಮನಸ್ಥಿತಿ ಇಟ್ಟುಕೊಂಡು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ತುಷ್ಟೀಕರಣದ ಪರಾಕಾಷ್ಟೆ ತಲುಪುತ್ತಿದ್ದಾರೆ” ಎಂದು ಜೋಶಿ ಕಿಡಿಕಾರಿದರು.
247 ಅಭ್ಯರ್ಥಿಗಳು ಮೊದಲ ಹಂತದ ಚುನಾವಣಾ ಕಣದಲ್ಲಿದ್ದಾರೆ
ಚೊಂಬು, ಪಿಕ್ ಪಾಕೆಟ್ ಪಕ್ಷ ಎಂಬಂತಹ ತೆಗಳಿಕೆ ಜಾಹೀರಾತುಗಳು ಸೇರಿ ರಾಜಕೀಯ ನಾಯಕರ ನಡುವೆ ಪರಸ್ಪರ ಮಾತಿನ ಸಮರದಿಂದ ಚುನಾವಣೆ ಕಣ ರಂಗೇರಿದೆ.
ಮಂಡ್ಯದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ ಒಡೆಯರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ ಎನ್ ಮಂಜುನಾಥ್, ಡಿ ಕೆ ಸುರೇಶ್ ಸೇರಿದಂತೆ ಘಟಾನುಘಟಿ ನಾಯಕರು ಸೇರಿ ಒಟ್ಟು 247 ಅಭ್ಯರ್ಥಿಗಳು ಮೊದಲ ಹಂತದ ಚುನಾವಣಾ ಕಣದಲ್ಲಿದ್ದಾರೆ.
ತವರು ಮೈಸೂರು- ಕೊಡಗು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದ್ದರೆ, ಸ್ವಕ್ಷೇತ್ರದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವ ಸಹೋದರ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಿಕೊಳ್ಳುವುದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಗೋವಾ ಸಿಎಂ ಪ್ರಮೋದ್ ಸಾವಂತ್ ಸೇರಿ ಹಲವು ಸ್ಟಾರ್ ಪ್ರಚಾರಕರು ಪ್ರಚಾರ ನಡೆಸಿದ್ದಾರೆ.
ಯಾವ ಕ್ಷೇತ್ರಗಳಲ್ಲಿ ಮತದಾನ?
ಉಡುಪಿ -ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.
ನಿಷೇಧಾಜ್ಞೆ ಜಾರಿ
ರಾಜ್ಯದಲ್ಲಿ ಏಪ್ರಿಲ್ 26ರಂದು ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕ್ಷೇತ್ರ ವ್ಯಾಪ್ತಿಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬುಧವಾರ (ಏ 24) ಸಂಜೆ 6 ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಹಾಗೆಯೇ ಈ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಸಹ ನಿಷೇಧವಿದೆ.