“ಸಂಸತ್ತಿನಲ್ಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಮಾತನಾಡಲೂ ಅವಕಾಶ ಕೊಡದೆ, ನಮ್ಮ ಧ್ವನಿ ಅಡಗಿಸುವ ಯತ್ನ ನಡೆದಿದೆ. ಜತೆಗೆ ಕೇಂದ್ರ ಸರ್ಕಾರ ರಾಜ್ಯದ ಪ್ರತಿ ಬಡವನ ಹೊಟ್ಟೆ ಮೇಲೆ ಹೊಡೆಯುತ್ತಿದೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು “ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಮಾತಿನ ನಂತರ ಕಲಾಪ ಅಂತ್ಯಗೊಳಿಸಿ, ರಾಜ್ಯದ ಪರ ಸುರೇಶ್ ಅವರ ಧ್ವನಿ ಎತ್ತಲು ಅವಕಾಶ ಕೊಡದೆ ಅನ್ಯಾಯ ಮಾಡಲಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯದ ಪರವಾಗಿ ಮಾತನಾಡದೆ ಪಕ್ಷಪಾತಿಯಾಗಿ ಮಾತನಾಡುತ್ತಿದ್ದರು. ನಮ್ಮ ಪಕ್ಷದ ಎಲ್ಲಾ ಮಂತ್ರಿಗಳು, ಶಾಸಕರು, ಸಂಸದರು ದೆಹಲಿಗೆ ಬಂದು ರಾಜ್ಯದ ಪರ ದನಿ ಎತ್ತಿದರು. ಈ ಬಗ್ಗೆ ಬಿಜೆಪಿ ಎಂಪಿಗಳಿಗೆ ನಾಚಿಕೆಯಾಗಬೇಕು” ಎಂದರು.
“ನಾವು ರಾಜ್ಯದ ಕೂಲಿ ಕಾರ್ಮಿಕರ ಪರವಾಗಿ ಹೋರಾಡುತ್ತೇವೆ. ಉದ್ಯೋಗ ಖಾತ್ರಿ ಯೋಜನೆ ಹಾಗೂ ರಾಜ್ಯದ ಅಭಿವೃದ್ದಿಗೆ ಬೇಕಾದ ಅನುದಾನಕ್ಕಾಗಿ ಹೋರಾಡುತ್ತೇವೆ” ಎಂದು ಹೇಳಿದರು.
“ಕರ್ನಾಟಕ ಸರ್ಕಾರ ನೀಡಿರುವ ಅಂಕಿ-ಅಂಶಗಳು ಸುಳ್ಳು ಎಂದು ಬಿಜೆಪಿ ಹೇಳುತ್ತಿದೆ ಎಂದು ಕೇಳಿದಾಗ “ಬಿಜೆಪಿಯವರು ಸುಳ್ಳು ಎನ್ನುತ್ತಿದ್ದಾರೆ. ನಾವು ಸತ್ಯ ಎನ್ನುತ್ತಿದ್ದೇವೆ. ಬಿಜೆಪಿಯವರು ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳುತ್ತಿದ್ದಾರೆ. ನಾವು ಶ್ವೇತ ಪತ್ರವನ್ನೇ ಅವರ ಮುಂದೆ ಇಡುತ್ತೇವೆ. ನಾವು ಯಾವುದೇ ಸುಳ್ಳು ಹೇಳುತ್ತಿಲ್ಲ” ಎಂದರು.
“ಕೇಂದ್ರ ಬಜೆಟ್ ಅನ್ನು ನಾನು ತಯಾರು ಮಾಡಿಲ್ಲ, ಕೇಂದ್ರ ಸರ್ಕಾರವೇ ತಯಾರು ಮಾಡಿದೆ. ಅದರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಹಣಕಾಸು ಆಯೋಗ ಬೆಂಗಳೂರಿಗೆ 5-6 ಸಾವಿರ ಕೋಟಿ ಕೊಡಬೇಕು ಎಂದು ಶಿಫಾರಸ್ಸು ಮಾಡಿತ್ತು, ಇವನ್ನು ಕೊಟ್ಟಿದ್ದಾರೆಯೇ” ಎಂದು ಪ್ರಶ್ನಿಸಿದರು.
ಬರಪರಿಹಾರವಾಗಿ ರಾಜ್ಯಕ್ಕೆ 6 ಸಾವಿರ ಕೋಟಿಯನ್ನು ಮುಂಗಡವಾಗಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ಕೊಟ್ಟಿದ್ದಾರೆ ಎಂದಾಗ “ಒಂದೇ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡಲಿದ್ದಾರೆ” ಎಂದರು.