Homeಕರ್ನಾಟಕಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಸಿಐಡಿ ತನಿಖೆಗೆ ವಹಿಸಿದ ಸಿಎಂ ಸಿದ್ದರಾಮಯ್ಯ

ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಸಿಐಡಿ ತನಿಖೆಗೆ ವಹಿಸಿದ ಸಿಎಂ ಸಿದ್ದರಾಮಯ್ಯ

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ಕಳಪೆ ಹಾಗೂ ಅವ್ಯವಹಾರದ ಬಗ್ಗೆ ತನಿಖೆಗೆ ಮುಖ್ಯಮಂತ್ರಿಗಳು ಸಿಐಡಿಗೆ ಒಪ್ಪಿಸಿದ್ದಾರೆ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ಫೆ. 2ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್.‌ ಹೆಬ್ಬಾಳ್ಕರ್ ಅವರು, ಥೀಮ್‌ ಪಾರ್ಕ್‌ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಈಗ ಮುಖ್ಯಮಂತ್ರಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಪರಶುರಾಮ‌ ಥೀಮ್‌ ಪಾರ್ಕ್‌ ಕಾಮಗಾರಿಯಲ್ಲಿ ನಡೆದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಬಗ್ಗೆ, ಜೊತೆಗೆ ಧಾರ್ಮಿಕ ಭಾವನೆಗಳಿಗೆ ಅಪಪ್ರಚಾರವಾಗಿರುವ ಸಂಬಂಧ ಸಾರ್ವಜನಿಕರಿಂದ ಭಾರೀ ದೂರು ಕೇಳಿ ಬಂದಿತ್ತು.

ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಖುದ್ದು ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿತ್ತು.

ಕಾರ್ಯಕರ್ತರ ಬಿಗಿಪಟ್ಟು

ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಿದ್ದ ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆ ಪ್ರಾರಂಭವಾಗುವವರೆಗೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದರು.

“ತನಿಖೆಯ ಬಗ್ಗೆ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ, ನಮ್ಮ ಹೋರಾಟಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ. ಆದ್ದರಿಂದ ತನಿಖೆ ಆರಂಭಿಸುವ ತನಕ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ತಮ್ಮನ್ನೂ ಸೇರಿಕೊಂಡು ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರು ದೂರ ಉಳಿಯಲಿದ್ದಾರೆ” ಎಂದು ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ಆಚಾರ್ಯ ತಿಳಿಸಿದ್ದರು.

ಏನಿದು ಪ್ರಕರಣ

ಕಾರ್ಕಳ ತಾಲೂಕಿನ ಬೈಲೂರಿನ ಉಮಿ ಕುಂಜ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಈ ಪಾರ್ಕ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2023ರ ಜ. 17ರಂದು ಉದ್ಘಾಟಿಸಿದ್ದರು. ಇಡೀ ಥೀಮ್ ಪಾರ್ಕ್ ಅನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಬೃಹತ್ತಾದ ಪರಶುರಾಮನ ಪುತ್ಥಳಿ, ಬಯಲು ರಂಗ ಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರ ಇವೆ.

ಪರಶುರಾಮನ ಪುತ್ಥಳಿಯು 53 ಅಡಿ ಎತ್ತರವಿದ್ದು, 15 ಟನ್ ತೂಕವಿದೆ. ಇದನ್ನು ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣನಾಯ್ಕ ಅವರು ನಿರ್ಮಿಸಿದ್ದಾರೆ. ಈ ಮೂರ್ತಿಗೆ ಕಂಚು ಮತ್ತು ಉಕ್ಕು ಬಳಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಪುತ್ಥಳಿಯನ್ನು ಫೈಬರ್‌ನಿಂದ ನಿರ್ಮಿಸಲಾಗಿದ್ದು, ಉಕ್ಕು ಮತ್ತು ಕಂಚಿನ ಪುತ್ಥಳಿಗಿಂತ ಕಡಿಮೆ ಖರ್ಚಿನಲ್ಲಿ ಈ ಪುತ್ಥಳಿ ನಿರ್ಮಿಸಲಾಗಿದೆ. ಕಂಚು, ಉಕ್ಕು ಬಳಸಲಾಗಿದೆ ಎಂದು ಹೇಳಿ ಆ ಹಣವನ್ನು ಈ ಥೀಮ್ ಪಾರ್ಕ್ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದ ಸ್ಥಳೀಯ ಶಾಸಕರು (ಸುನಿಲ್ ಕುಮಾರ್) ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments