ಬೆಂಗಳೂರು ನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದ ಪರಿಣಾಮ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಮಳೆಯಿಂದಾಗಿ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿಗೂ ನೀರು ನುಗ್ಗಿದೆ. ಕಚೇರಿಯ ಕೆಳ ಮಹಡಿಯಲ್ಲಿ ಮೊಣಕಾಲುವರೆಗೂ ನೀರು ನಿಂತಿದ್ದು, ಬೆಳಗ್ಗೆಯವರೆಗೂ ನೀರಿನ ಮಟ್ಟ ಕಡಿಮೆಯಾಗಿಲ್ಲ. ನೀರು ನುಗ್ಗಿರುವುದರಿಂದ ಕೆಲ ಕಡತಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.
ಚಾಮರಾಜಪೇಟೆಯಲ್ಲಿ ಸಿಸಿಬಿ ಕಚೇರಿಯ ಹಳೆ ಕಟ್ಟದ ಶಿಥಿಲಾವಸ್ಥೆ ತಲುಪಿದ್ದರಿಂದ ಶಾಂತಿನಗರದಲ್ಲಿರುವ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು. ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿದರೂ ಸಹ ಮಳೆ ಸಂದರ್ಭದಲ್ಲಿ ಸೂಕ್ತ ನಿರ್ವಹಣೆ ಸೌಲಭ್ಯ ಇಲ್ಲದಿರುವುದು ಕಚೇರಿ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.
ಭಾನುವಾರದ ಮಳೆಯಿಂದ ವಸತಿ ಪ್ರದೇಶಗಳಲ್ಲಿ ಹೆಚ್ಚಿನ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೊರಮಾವು ಸುತ್ತಮುತ್ತ ಧಾರಾಕಾರ ವರ್ಷಧಾರೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಹೊರಮಾವು ಬಳಿಯ ನೆಲ ಮಹಡಿಯ ಮನೆಗಳಿಗೆ ನೀರು ನುಗ್ಗಿ ಪೀಠೋಪಕರಣಗಳು ಮತ್ತು ಉಪಕರಣಗಳಿಗೆ ಹಾನಿಯಾಗಿದೆ. ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತ ಕಾರಣ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿತ್ತು. ಸಾರ್ವಜನಿಕ ಸಾರಿಗೆ ಸೇವೆಗಳಿಗೂ ಅಡಚಣೆ ಉಂಟಾಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.
ಕಾವೇರಿನಗರ, ಸಂಪಂಗಿರಾಮನಗರದ ಮನೆಗಳಿಗೂ ಸಹ ಮಳೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಜಯನಗರ, ಬಿಟಿಎಂ ಲೇಔಟ್‌ನ ಹಲವೆಡೆ ಮರಗಳು ಧರೆಗುರುಳಿವೆ. ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರುಗಳಲ್ಲಿ ರಸ್ತೆಯಲ್ಲಿ ಮೊಣಕಾಲು ಮಟ್ಟದ ನೀರು ನಿಂತಿದ್ದು, ವಾಹನ ಸವಾರರ ಪರದಾಟಕ್ಕೆ ಕಾರಣವಾಗಿದೆ. ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 5-6 ಕಿ.ಮೀ.ಗಳಷ್ಟು ಸಂಚಾರ ದಟ್ಟಣೆ ಉಂಟಾಗಿದ್ದು, ಟ್ರಾಫಿಕ್ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹೈರಾಣಾಗಿದ್ದಾರೆ.
ಹಠಾತ್ ಮಳೆಯಿಂದ ನಗರದ ಒಳಚರಂಡಿ ಅವ್ಯವಸ್ಥೆ ಹಿನ್ನೆಲೆಯಲ್ಲಿ ಜನರು ಮೊಣಕಾಲು ಆಳದ ನೀರಿನಲ್ಲೇ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಬೀದಿಗಳು ಹೊಳೆಗಳಂತೆ ಮಾರ್ಪಟ್ಟು, ಹಲವಾರು ವಾಹನಗಳು ಭಾಗಶಃ ಮುಳುಗಿಹೋಗಿದ್ದವು.