ಬೆಂಗಳೂರು ನಗರದ ಕುಂದಲಹಳ್ಳಿಯ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಶುಕ್ರವಾರ ನಿಗೂಢ ವಸ್ತು ಸ್ಫೋಟವಾಗಿದ್ದು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.
ಸ್ಫೋಟದ ತೀವ್ರತೆಗೆ ರಾಮೇಶ್ವರಂ ಕೆಫೆ ಹಾನಿಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಕೂಡಲೇ ಖಾಸಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಪೋಟವಾಗುತ್ತಿದ್ದಂತೆಯೇ ಜನರು ಭಯಭೀತರಾಗಿ ಓಡಿಡಾಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ.
ಹೊರಗಡೆಯಿಂದ ತಂದಿದ್ದ ವಸ್ತು ಸ್ಫೋಟ
ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಕೂಡ ಆಗಿರಬಹುದೆಂದು ಎಂದು ಶಂಕಿಸಲಾಗಿತ್ತು. ಆದರೆ, ಸ್ಫೋಟದಲ್ಲಿ ಕೆಲ ಐಡಿ ಕಾರ್ಡ್ಗಳು ದೊರೆತಿವೆ. ಇನ್ನು ಬ್ಲಾಸ್ಟ್ ನಡೆದ ಸ್ಥಳದ ಸಮೀಪದಲ್ಲೇ ಒಂದು ಬ್ಯಾಟರಿ ಪತ್ತೆಯಾಗಿದೆ. ಅಲ್ಲದೇ ಹೋಟೆಲ್ಗೆ ಗ್ರಾಹಕರೊಬ್ಬರ ಬ್ಯಾಗ್ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹಲವು ಅ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಥಳಕ್ಕೆ ಪ್ರಯೋಗಾಲಯದ ತಜ್ಞರು ದೌಡು
ಸ್ಫೋಟದ ಹಿಂದೆ ಕಿಡಿಗೇಡಿಗಳ ಕೃತ್ಯ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದಾರೆ. ಅಗತ್ಯ ಉಪಕರಣಗಳ ಜೊತೆ ರಾಮೇಶ್ವರಂ ಕೆಫೆಗೆ ಬಂದಿರುವ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿದೆ.
ಹೋಟೆಲ್ನಲ್ಲಿದ್ದ ಯಾವುದೇ ವಸ್ತು ಸ್ಫೋಟವಾಗಿಲ್ಲ. ಬದಲಾಗಿ ಹೊರಗಡೆಯಿಂದ ಹೋಟೆಲ್ಗೆ ತಂದ ವಸ್ತುವಿನಿಂದ ಸ್ಫೋಟವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಬಂದಿದ್ದು, ತಪಾಸಣೆ ನಡೆಸಿವೆ.
ಎನ್‌ಐಎ ಮತ್ತು ಐಬಿಗೆ ಮಾಹಿತಿ
“ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಗುಪ್ತಚರ (ಐಬಿ) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ” ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದ್ದಾರೆ.
ಸ್ಫೋಟ ಸಂಭವಿಸಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಪರಿಶೀಲನೆ ನಡೆಸಿದರು. ಪರಿಶೀಲನೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸ್ಫೋಟಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಯಲದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಂದ ವರದಿ ಬಂದ ನಂತರ, ಖಚಿತ ಮಾಹಿತಿ ತಿಳಿಯಲಿದೆ. ಗ್ರಾಹಕರು ಏನಾದರೂ ತಂದಿದ್ದರಾ? ಇಲ್ಲ ಬೇರೆ ಏನಾದರೂ ಕಾರಣವಿದೆಯಾ? ಎಂಬುದನ್ನು ಸದ್ಯಕ್ಕೆ ಹೇಳಲಾಗದು” ಎಂದರು.
ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಸ್ಫೋಟಕ ಮಾಹಿತಿ
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ದಿವ್ಯಾ ಅವರು, “ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ್ದೇನೆ. 10 ಸೆಕೆಂಡುಗಳಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಕೈತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲಿ ಯಾವುದೇ ಸಿಲಿಂಡರ್ ಇಟ್ಟಿರಲಿಲ್ಲ. ಅಲ್ಲದೇ ಕೆಫೆಯಲ್ಲಿಟ್ಟಿದ್ದ ಸಿಲಿಂಡರ್‌ಗಳು ಸೇಫ್ ಆಗಿದೆ. ಸ್ಫೋಟ ಸಂಭವಿಸಿದ ಜಾಗದಲ್ಲಿ ಉದ್ಯೋಗಿಯೊಬ್ಬರ ಐಡಿ ಕಾರ್ಡ್ ಪತ್ತೆಯಾಗಿದೆ. ಬ್ಯಾಟರಿ ಬೋಲ್ಟ್‌ಗಳು ಸಿಕ್ಕಿರೋದನ್ನ ಗಮನಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.
“ನಮಗೆ ಸಿಕ್ಕ ಮಾಹಿತಿ ಪ್ರಕಾರ, ಯಾರೋ ಗ್ರಾಹಕರ ರೀತಿ ಬಂದು ಬ್ಯಾಗ್ ಇಟ್ಟು ಹೋಗಿದ್ದಾರೆ. ಆ ಬ್ಯಾಗ್‌ನಿಂದ ಬ್ಲಾಸ್ಟ್ ಆಗಿದೆ. ಆತ ಬಂದು ಹೋಗಿರುವ ನಿಖರವಾದ ಸಮಯದ ಬಗ್ಗೆ ಮಾಹಿತಿ ಇಲ್ಲ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.