Homeಕರ್ನಾಟಕಮುಡಾ ಹಗರಣ | ಮೈಸೂರಿನಲ್ಲಿ ಜು.12ರಂದು ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

ಮುಡಾ ಹಗರಣ | ಮೈಸೂರಿನಲ್ಲಿ ಜು.12ರಂದು ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಅವ್ಯವಹಾರ ಖಂಡಿಸಿ ಜು.12ರಂದು ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬುಧವಾರ ಮಾತನಾಡಿ, “ಖುಷಿ ಬಂದಂತೆ ನಿವೇಶನ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಈ ಹಗರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇದೇ 12ರಂದು ನಾನು, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಬಿಜೆಪಿ ಶಾಸಕರು, ಕಾರ್ಯಕರ್ತರು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ” ಎಂದು ತಿಳಿಸಿದರು.

“ಮುಖ್ಯಮಂತ್ರಿಗಳು ಬಡವರ ಬಗ್ಗೆ ಮೊಸಳೆಕಣ್ಣೀರು ಹಾಕುತ್ತಿದ್ದಾರೆ. ಬಡವರಿಗೆ ನಿವೇಶನ ಹಂಚಬೇಕು. ಈಗಾಗಲೇ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಸಿಎಂ, ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್‍ಐಟಿ ಮಾಡಿ ತನಿಖೆ ನಡೆಸುವುದು ಸೂಕ್ತವಲ್ಲ. ಈ ಭಾರಿ ಮೊತ್ತದ ಹಗರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ಕೊಡಬೇಕು” ಎಂದು ಆಗ್ರಹಿಸಿದರು.

“ಶಾಸಕರು, ಸಿಎಂ ಪರಮಾಪ್ತರು ನಿನ್ನೆ ಪ್ರೆಸ್ ಮೀಟ್ ಮಾಡಿದ್ದಾರೆ. 92ರಲ್ಲಿ ಭೂ ವಶಕ್ಕೆ ಪಡೆಯುವ ಕೆಲಸ ಶುರುವಾಗಿದೆ. 2004ರಲ್ಲಿ ಪಾರ್ವತಮ್ಮ ಅವರ ಅಣ್ಣ ಜಮೀನು ಖರೀದಿ ಮಾಡಿದ್ದಾರೆ. ಮೂಡಾ ಸ್ವಾಧೀನದಲ್ಲಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿ ಮಾಡಿದ್ದು ಹೇಗೆ? 2009- 10ರಲ್ಲಿ ಗಿಫ್ಟ್ ಡೀಡ್ ಆದಾಗಲೂ ಸಹ ಈ ಜಾಗವು ಮೂಡಾ ಆರ್‌ಟಿಸಿಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಕನ್ವರ್ಷನ್ ಆಗಿತ್ತು. ಗಿಫ್ಟ್ ಡೀಡ್ ಎಂದು ಮಾಹಿತಿ ಕೊಡುವಾಗಲೂ ಅದು ಕೃಷಿ ಭೂಮಿ ಆಗಿರಲಿಲ್ಲ. ಇದು ಕೂಡ ತಪ್ಪು ಮಾಹಿತಿ” ಎಂದರು.

2 ನಿವೇಶನಕ್ಕೆ ಅರ್ಹತೆ- 14 ನಿವೇಶನ ಹಂಚಿಕೆ

“2022ರ ಜನವರಿ 12ರಂದು ಕ್ರಯಪತ್ರ ಆಗಿದ್ದು, ಇದರಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಮೂಡಾ ಪ್ರೋತ್ಸಾಹದಾಯಕ ಯೋಜನೆಯಡಿಯಲ್ಲಿ ನಿಯಮಗಳು 1991ರ ಮೇರೆಗೆ ಎಂದು ಉಲ್ಲೇಖಿಸಿ 14 ಸೈಟ್ ಕೊಟ್ಟಿದ್ದಾರೆ. ಇದು ಕ್ರಯಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, 1991ರ ಕಾನೂನು ಪ್ರಕಾರ ಅವರಿಗೆ 1 ಎಕರೆ ಮೀರಿದ ಜಮೀನಾದರೆ 40-60 ಒಂದೇ ನಿವೇಶನ ಕೊಡಬೇಕು. 3ರಿಂದ 4 ಎಕರೆ ಆಗಿದ್ದರೆ 4,800 ಅಡಿಯ ನಿವೇಶನ (40-60ರ ಎರಡು ನಿವೇಶನ) ಕೊಡಬೇಕಿತ್ತು. ಮುಖ್ಯಮಂತ್ರಿಯವರ ಧರ್ಮಪತ್ನಿ ಪಾರ್ವತಮ್ಮ ಅವರಿಗೆ 2 ನಿವೇಶನ ಮಾತ್ರ ಕೊಡಬೇಕಿತ್ತು. 2 ನಿವೇಶನದ ಬದಲು 14 ನಿವೇಶನ ಕೊಟ್ಟಿದ್ದು, ಇದು ಸಂಪೂರ್ಣ ಕಾನೂನು ಬಾಹಿರ” ಎಂದು ವಿಜಯೇಂದ್ರ ಆಕ್ಷೇಪಿಸಿದರು.

“ಮೈಸೂರಿನದು ಲ್ಯಾಂಡ್ ಸ್ಕ್ಯಾಮ್; ಮೂಡಾ ಪ್ರಾಧಿಕಾರದ ಭೂಮಿ ಸಂಬಂಧ ದೊಡ್ಡ ಹಗರಣ ಅಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಮುಖವಾಡ ಕಳಚಿಬಿದ್ದಿದೆ. ಹೇಗಾದರೂ ಬೆಲೆಬಾಳುವ ನಿವೇಶನ ಕಬಳಿಸಬೇಕು ಎಂದುಕೊಂಡು ನಿಯಮ ಗಾಳಿಗೆ ತೂರಿ ಅಕ್ರಮ ನಡೆಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು. ಈ ಹಗರಣಕ್ಕೆ ಹೊಣೆ ಹೊರಬೇಕು” ಎಂದು ಒತ್ತಾಯಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಮಾಜಿ ಸಚಿವ ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಅವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments