Homeಕರ್ನಾಟಕಮುಡಾ ಕೇಸ್‌ | ಭಂಡತನ ಬೇಡ, ಸಿಎಂ ರಾಜೀನಾಮೆ ಕೊಡಲಿ, ಸಿಬಿಐ ತನಿಖೆ ನಡೆಯಲಿ: ವಿಜಯೇಂದ್ರ

ಮುಡಾ ಕೇಸ್‌ | ಭಂಡತನ ಬೇಡ, ಸಿಎಂ ರಾಜೀನಾಮೆ ಕೊಡಲಿ, ಸಿಬಿಐ ತನಿಖೆ ನಡೆಯಲಿ: ವಿಜಯೇಂದ್ರ

ಮೈಸೂರು ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿಗಳು ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡುವ ಮುಂಚಿತವಾಗಿ ಸಿಬಿಐ ತನಿಖೆಗೆ ಪ್ರಕರಣವನ್ನು ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಶಿವಾನಂದ ಸರ್ಕಲ್ ಸಮೀಪ ಇರುವ ತಮ್ಮ ನಿವಾಸದ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮುಡಾ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸ್ನೇಹಮಯಿ ಕೃಷ್ಣ ಅವರು ಬಯಲಿಗೆ ಎಳೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಇದರ ವಿರುದ್ಧ ಸದನದ ಒಳಗಡೆ ಹಾಗೂ ಸದನದ ಹೊರಗಡೆ ಹೋರಾಟ ಮಾಡುತ್ತ ಬಂದಿದ್ದೇವೆ. ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದೆವು” ಎಂದು ವಿವರಿಸಿದರು.

“ಮುಡಾ ಹಗರಣವು ನಿನ್ನೆ ಮಹತ್ವದ ತಿರುವು ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯವು (ಇಡಿ) 300 ಕೋಟಿಗೂ ಹೆಚ್ಚು ಬೆಲೆಬಾಳುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ವಿಶ್ಲೇಷಿಸಿದರು. ಹಗರಣದಿಂದ ಮುಡಾಕ್ಕೆ ಕೋಟಿಗಟ್ಟಲೆ ನಷ್ಟವಾಗಿದೆ” ಎಂದು ಗಮನ ಸೆಳೆದರು.

“ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದ್ದು ಸ್ಪಷ್ಟವಾಗಿದೆ. ಇದರಿಂದ ಸರಕಾರ ಮತ್ತು ಮುಡಾಕ್ಕೆ ಸಾವಿರಾರು ಕೋಟಿ ನಷ್ಟವಾದುದು ಮತ್ತೊಮ್ಮೆ ಋಜುವಾತಾಗಿದೆ ಎಂದು ಅವರು ನುಡಿದರು. ಪ್ರಕರಣವನ್ನು ಬಯಲಿಗೆ ಎಳೆದ ಸ್ನೇಹಮಯಿ ಕೃಷ್ಣ ಅವರನ್ನು ಅಭಿನಂದಿಸಿದರು. ಸ್ನೇಹಮಯಿ ಕೃಷ್ಣ ಅವರ ಧ್ವನಿ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿತ್ತು” ಎಂದು ಆಕ್ಷೇಪಿಸಿದರು.

“ಸ್ನೇಹಮಯಿ ಕೃಷ್ಣ ಅವರ ಮೇಲೆ ಆರೋಪ ಹೊರಿಸಿ ಅವರನ್ನು ಬಂಧಿಸುವ ಹಂತಕ್ಕೂ ರಾಜ್ಯ ಸರಕಾರ ಹೋಗಿತ್ತು. ಇ.ಡಿ. ಕೈಗೊಂಡ ಕ್ರಮಗಳಿಂದ ಸಿದ್ದರಾಮಯ್ಯನವರು ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟ ಮಾನ್ಯ ರಾಜ್ಯಪಾಲರ ಮೇಲೂ ಅಪವಾದ ಹೊರಿಸುವ ಕೆಲಸವನ್ನು ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ಸಚಿವರು ಮಾಡಿದ್ದರು. ಘನತೆವೆತ್ತ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟದ್ದೇ ಅಪರಾಧ ಎಂಬಂತೆ ಬಿಂಬಿಸಲು ಯತ್ನಿಸಿದ್ದರು. ನಂತರ ರಾಜ್ಯ ಹೈಕೋರ್ಟ್, ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟದ್ದು ಸರಿಯಾಗಿದೆ; ಮೇಲ್ನೋಟಕ್ಕೆ ಮುಡಾ ಹಗರಣದಲ್ಲಿ ತಪ್ಪು, ಅವ್ಯವಹಾರ ನಡೆದಿದೆ ಎಂದಿತ್ತು. ಅಲ್ಲದೆ, ಸಿಎಂ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನ ಕೊಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೇ ಋಜುವಾತಾದಾದುದನ್ನು ಹೈಕೋರ್ಟ್ ಮತ್ತೊಮ್ಮೆ ಹೇಳಿತ್ತು” ಎಂದು ವಿವರಿಸಿದರು.

“ನಮಗೆ ಸಿದ್ದರಾಮಯ್ಯನವರ ಬಗ್ಗೆ ದ್ವೇಷ ಇಲ್ಲ; ಆದರೆ, ಅಪರಾಧ ಆದ ಸಂದರ್ಭದಲ್ಲಿ, ತಪ್ಪಾಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ರಾಜೀನಾಮೆ ಕೊಡಬೇಕಾಗಿತ್ತು. ಮುಖ್ಯಮಂತ್ರಿಗಳು ಸ್ವಯಂಪ್ರೇರಿತರಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಿತ್ತು. ಸಿದ್ದರಾಮಯ್ಯನವರು ಹಗರಣವನ್ನು ದೀರ್ಘ ಕಾಲ ಎಳೆದುಕೊಂಡು ಬಂದಿದ್ದಾರೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments