ಹೊಸ ಸರ್ಕಾರ ಬಂದು ಎಂಟು ತಿಂಗಳಾಗಿದೆ. ಒಂದೂ ಹೊಸ ಯೋಜನೆ ಜಾರಿಗೆ ತಂದಿಲ್ಲ. ಈಗ ಗ್ಯಾರಂಟಿ ಹೆಸರಲ್ಲಿ ಅಕ್ಷತೆ ಬೇಕಾ-ಗ್ಯಾರಂಟಿ ಬೇಕಾ ಎಂದು ಕೇಳುವ ಮೂಲಕ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಜನರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದರು.
ಮೂಡಿಗೆರೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಇಲ್ಲ. ಇವರು ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೀತಿ ಬ್ಲಾಕ್‌ಮೇಲ್ ಮಾಡುವ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು” ಎಂದರು.
“ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯದ ಜನ ಬೀದಿಗೆ ಬರುವ ಸ್ಥಿತಿ ಬಂದಿದೆ. ಗ್ಯಾರಂಟಿ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ತನ್ನ ಸೋಲು ಒಪ್ಪಿಕೊಂಡಿದೆ” ಎಂದು ಟೀಕಿಸಿದರು.
“ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ 28 ಸ್ಥಾನ ಗೆಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲ” ಎಂದರು.
“ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಕಂಡಿದೆ. ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ಬಳಿಕ ದೇಶದ ವಾತಾವರಣ ಬದಲಾಗಿದೆ. ಇದರಿಂದ ಕಾಂಗ್ರೆಸ್ ನಾಯಕರು ಭಯಭೀತರಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ರಾಜ್ಯ-ದೇಶದಲ್ಲಿ ಹನುಮ ಧ್ವಜಕ್ಕೆ ಕಾಂಗ್ರೆಸ್ ವಿರೋಧಿಸುವುದು ನಾಚಿಕೆಗೇಡು. ಪ್ರತಿಯೊಬ್ಬ ರಾಮ ಭಕ್ತನು ದುಷ್ಟ ರಾಜ್ಯ ಸರ್ಕಾರದ ನಡವಳಿಕೆ ಗಮನಿಸುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವಂದ್ವದಲ್ಲಿದ್ದು, ಯಾವುದೇ ತೀರ್ಮಾನ ಮಾಡಲಾಗುತ್ತಿಲ್ಲ. ಕಾಂಗ್ರೆಸ್ ಮೊದಲು ದೇಶ ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.