ಬೆಂಗಳೂರು: ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ರಾಜ್ಯದ ಅಂತರಿಕ ಭದ್ರತಾ ವಿಭಾಗದ(ಐಎಸ್ ಡಿ) ಎಸ್ ಪಿ ಕರ್ನಾಟಕದ ಕೇಡರ್‌ನ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಅಂತರಿಕ ಭದ್ರತಾ ವಿಭಾಗದ ಎಸ್ ಪಿಯಾಗಿ ಧಾರವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರನ್ನು ತಮಿಳುನಾಡಿನ ಗೋಬಿ ಠಾಣೆ ಪೊಲೀಸರು ಅನುಚಿತವಾಗಿ ವರ್ತನೆ ಸಂಬಂಧ ಮಹಿಳಾ ಪೊಲೀಸ್ ಸಿಬ್ಬಂದಿ ನೀಡಿದ ದೂರು ಆಧರಿಸಿ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಅರುಣ್ ರಂಗರಾಜನ್ ಅನುಚಿತ ವರ್ತನೆ ಸಂಬಂಧ ದೂರು ನೀಡಿದ ಮಹಿಳೆ ಚಿಂಚೋಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಈ ಮಹಿಳೆ ಜತೆ ಐಪಿಎಸ್ ಅಧಿಕಾರಿ ಅರುಣ ರಂಗರಾಜನ್ ತಮಿಳುನಾಡಿನ ತಿರುಚ್ಚಿಗೆ ತೆರಳಿದ್ದಾಗ ಅವರಿಬ್ಬರ ಮಧ್ಯೆ ಜಗಳವಾಗಿದೆ. ಸ್ಥಳೀಯ ಪೊಲೀಸರು ರಾಜಿ ಮಾಡಿ ಕಳಿಸಿದ್ದರು. ಅರುಣ್ ಅವರು ತಮ್ಮ ಹುಟ್ಟೂರು ತಿರುಚ್ಚಿಯ ಶ್ರೀರಂಗಂಗೆ ತಮ್ಮನ್ನು ಕರೆದೊಯ್ದಿದ್ದು, ಹಲ್ಲೆ ನಡೆಸಿದ್ದಾರೆ ಎಂದು ಮಹಿಳಾ ಪೊಲೀಸ್ ಗೋಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಅರುಣ್ ಅವರನ್ನು ಬಂಧಿಸಲಾಗಿತ್ತು.
ಕಲಬುರಗಿಯಲ್ಲಿ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ತಮ್ಮ ಪತ್ನಿಯನ್ನು ಅಕ್ರಮವಾಗಿ ಬಂಧನಲ್ಲಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯ ಪತಿ ಕಳೆದ
ಮಾರ್ಚ್‌ನಲ್ಲಿ ದೂರು ದಾಖಲು ಮಾಡಿದ್ದರು. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯ ಇನ್ಸ್‌ಪೆಕ್ಟರ್ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.