ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಗಿದೆ.
ಮಹುವಾ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ತನ್ನ ವರದಿಯನ್ನು ಲೋಕಸಭೆಯ ನೀತಿ ಸಮಿತಿಯು ನವೆಂಬರ್ 9ರಂದು ಅಂಗೀಕರಿಸಿತ್ತು. 495 ಪುಟಗಳ ಈ ವರದಿಯನ್ನು ನೀತಿ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಸೋನಕರ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.
ದೂರಿನ ಕುರಿತು ನೈತಿಕ ಸಮಿತಿಯ ವರದಿಯನ್ನು ಆಧರಿಸಿ ಮಹುವಾ ಮೊಯಿತ್ರಾ ಅವರನ್ನು ಸದನದ ಸದಸ್ಯತ್ವದಿಂದ ಹೊರಹಾಕುವ ನಿರ್ಣಯವನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿ, ಡಿಸೆಂಬರ್ 11ರವರೆಗೆ ಸದನದ ಕಲಾಪಗಳನ್ನು ಮುಂದೂಡಲಾಯಿತು.
ಸದನದ ನಿರ್ಧಾರವನ್ನು ಓದಿದ ಸ್ಪೀಕರ್ ಓಂ ಬಿರ್ಲಾ, “ಸಂಸದೆ ಮಹುವಾ ಮೋಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಸರಿಯಾದುದಲ್ಲ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನವು ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದೆಯಾಗಿ ಮುಂದುವರಿಯುವುದು ಸೂಕ್ತವಲ್ಲ” ಎಂದು ಹೇಳಿದ್ದಾರೆ.