ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಬಂಡವಾಳ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲವೆಂಬುದನ್ನು ಅವರು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಜನರನ್ನೂ ತಲುಪುತ್ತಿಲ್ಲ ಎಂಬ ಪ್ರತಿಪಕ್ಷ ನಾಯಕ ಆರ್ .ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೇವಲ ಆರೋಪ ಮಾಡುವ ಉದ್ದೇಶದಿಂದ ಆರೋಪಿಸುತ್ತಿದ್ದಾರೆ” ಎಂದರು.
“ಇದುವರೆಗೆ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದೆ. ಇದರಲ್ಲಿ 1.14 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿದ್ದು, ಇನ್ನೂ 3 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಗೃಹಲಕ್ಷ್ಮಿ ನೋಂದಾಯಿಸಿಕೊಂಡಿರುವವರಿಗೆ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ನೀಗಿಸಿ, ಹಣ ಒದಗಿಸಲು ಸೂಚನೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 4.34 ಕೋಟಿ ಜನರಿಗೆ ಪ್ರತಿ ಮಾಹೆ 170 ರೂ. ನೀಡಲಾಗುತ್ತಿದೆ. ಇದುವರೆಗೆ 1.50 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಸುಳ್ಳು ಎಂದು ಬಿಜೆಪಿಯವರು ಸಾಬೀತುಪಡಿಸಲಿ” ಎಂದು ಸವಾಲು ಹಾಕಿದರು.
ಕೇಂದ್ರದ ವಿಳಂಬಕ್ಕೆ ಕಾರಣವೇನು?
ಕೇಂದ್ರದಿಂದ ಬರಪರಿಹಾರ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಉತ್ತರಿಸಿ, “ರಾಜ್ಯದಿಂದ ಪಡೆದ ಹಣವನ್ನೇ ಕೇಂದ್ರ ಸರ್ಕಾರ ಪರಿಹಾರವಾಗಿ ನೀಡುತ್ತದೆ. ಈ ಪರಿಹಾರವನ್ನು ನೀಡಲು ಕೇಂದ್ರ ವಿಳಂಬನೀತಿ ತೋರುತ್ತಿದೆ. ಈ ವಿಳಂಬಕ್ಕೆ ಕಾರಣವೇನು ? ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ತೆರಿಗೆ ಹಣ ಕೇಂದ್ರಕ್ಕೆ ತಲುಪಿದರೂ, ರಾಜ್ಯಕ್ಕೆ ಪರಿಹಾರವಾಗಿ ಕೇವಲ 50 ರಿಂದ 60 ಸಾವಿರ ಕೋಟಿ ಬರುತ್ತದೆ” ಎಂದರು.