ಜನಸ್ಪಂದನ ಕಾರ್ಯಕ್ರಮಕ್ಕೆ ಸುಮಾರು ನಾಲ್ಕೈದು ಸಾವಿರ ಜನರು ತಮ್ಮ ಅಹವಾಲುಗಳೊಂದಿಗೆ ಆಗಮಿಸಿದ್ದು, ಜನರು ನಮ್ಮ ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.
“ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಜನಸ್ಪಂದನೆ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಸುಮಾರು 3500 ಮನವಿಗಳು ಸ್ವೀಕೃತವಾಗಿದೆ. ನಾನು ಬೆಳಿಗ್ಗೆಯಿಂದಲೇ ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಖುದ್ದು ಆಲಿಸಿದ್ದೇನೆ. ಸ್ವೀಕೃತವಾಗಿರುವ ಎಲ್ಲ ಅರ್ಜಿಗಳ ಬಗ್ಗೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದರು.
ಅಧಿಕಾರಿಗಳಿಗೆ ಸೂಚನೆ
“ಇಂದಿನ ಜನಸ್ಪಂದನಕ್ಕೆ ಉದ್ಯೋಗ ಬೇಡಿಕೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಆಗಮಿಸಿದ್ದು, ಸಾಧ್ಯವಾದ ಕಡೆಗಳಲ್ಲಿ ಉದ್ಯೋಗ ಹಾಗೂ ಮಾಸಾಶನ ಒದಗಿಸಲು ಸೂಚನೆ ನೀಡಲಾಗಿದೆ. ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಜನರ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಲಾಗಿದೆ. ಮೂರು ತಿಂಗಳ ನಂತರ ಮತ್ತೊಮ್ಮೆ ಜನಸ್ಪಂದನ ನಡೆಸಲಾಗುವುದು. ಆಗ ಈ ಪ್ರಮಾಣದಲ್ಲಿ ಜನರು ತಮ್ಮ ಸಮಸ್ಯೆಗಳೊಂದಿಗೆ ಬರದಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ” ಎಂದರು.
ಜನರ ಆರೋಗ್ಯ ವೆಚ್ಚಕ್ಕೆ 25 ಕೋಟಿ ರೂ. ಬಿಡುಗಡೆ
“ಕ್ಯಾನ್ಸರ್, ಕಿಡ್ನಿ, ಹೃದಯ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ವೈದ್ಯಕೀಯ ವೆಚ್ಚ ಭರಿಸುವ ಮನವಿಗಳು ಹೆಚ್ಚು ಸ್ವೀಕೃತವಾಗಿವೆ. ನಾನು ಮುಖ್ಯಮಂತ್ರಿಯಾದ ನಂತರ ಜನರ ಆರೋಗ್ಯಸಮಸ್ಯೆಗಳ ಪರಿಹಾರಕ್ಕಾಗಿ ಸುಮಾರು 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭಿಸುತ್ತದೆ ಎಂಬ ನಂಬಿಕೆಯಿಂದ ಜನರು ಸರ್ಕಾರಿ ಆಸ್ಪತ್ರೆ ಬಿಟ್ಟು, ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವ ಕಾರಣ, ಅವರ ವೈದ್ಯಕೀಯ ವೆಚ್ಚಗಳೂ ಹೆಚ್ಚಾಗುತ್ತವೆ. ಆ ವೆಚ್ಚದಲ್ಲಿ ಸಣ್ಣಪ್ರಮಾಣವನ್ನು ಸರ್ಕಾರ ಈ ರೀತಿ ಭರಿಸಲು ಪ್ರಯತ್ನಿಸುತ್ತದೆ” ಎಂದರು.
ಸಚಿವರ ಜನತಾ ದರ್ಶನ
“ಸಚಿವರು ಜನತಾ ದರ್ಶನ ಸಮರ್ಪಕವಾಗಿ ಮಾಡುತ್ತಿಲ್ಲವೇಕೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಲ ಸಚಿವರೂ ಜನತಾ ದರ್ಶನ ಮಾಡಿದ್ದು, ಕಾರ್ಯಕ್ರಮ ನಡೆಸಿದ ಬಗ್ಗೆ ವರದಿ ನೀಡಲಿದ್ದಾರೆ” ಎಂದು ಹೇಳಿದರು.
ಮಕ್ಕಳ ಪೌಷ್ಟಿಕಾಂಶ
ಮಕ್ಕಳ ಪೌಷ್ಟಿಕಾಂಶ ಸಮಸ್ಯೆಗಳ ಬಗ್ಗೆ ಇಂದು ಅಹವಾಲುಗಳ ಬಂದಿರುವ ಬಗ್ಗೆ ಉತ್ತರಿಸಿ, “ಮಕ್ಕಳ ಪೌಷ್ಠಿಕಾಂಶ ವೃದ್ಧಿಸುವ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 185 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ. ಅನೀಮಿಯಾ ಇರುವ ಮಕ್ಕಳಿಗೆ ಔಷಧಿ, ಶಾಲಾಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ , ಪ್ರತಿದಿನವು ಹಾಲು, ಬಿಸಿಯೂಟ ನೀಡಲಾಗುತ್ತಿದೆ” ಎಂದರು.
ಭ್ರೂಣ ಹತ್ಯೆ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ
ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಭ್ರೂಣಹತ್ಯೆ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ, ಈ ದುಷ್ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಪಡಿತರ ಅಕ್ಕಿ ಕಳುವು
ಯಾದಗಿರಿಯಲ್ಲಿ ಪಡಿತರ ಅಕ್ಕಿ ಕಳುವು ಹಗರಣ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಜಿಲ್ಲೆಯಲ್ಲಿ ಅಕ್ಕಿ ಕಳುವು ನಡೆದಿದ್ದರೆ, ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು” ಎಂದರು.
ಹೆಚ್ಚುವರಿ ಬಸ್ ಗಳಿಗೆ ವ್ಯವಸ್ಥೆ
ಶಕ್ತಿ ಯೋಜನೆ ಯಶಸ್ವಿಯಾದರೂ, ಬಸ್ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಈಗಾಗಲೇ 971 ಬಸ್ಸಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಅಗತ್ಯವಿರುವೆಡೆ ಹೆಚ್ಚು ಬಸ್ಗಳನ್ನು ಹಾಕಲು ತಿಳಿಸಲಾಗಿದೆ” ಎಂದು ಹೇಳಿದರು.