ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆ.
ಲೋಕಾಯುಕ್ತ ಕಚೇರಿಗೆ ಇಂದು ಬೆಳಿಗ್ಗೆ 10 ಗಂಟೆಗೆ ತೆರಳಿಲಿರುವ ಸಿದ್ದರಾಮಯ್ಯ ಖುದ್ದು ವಿಚಾರಣೆ ಎದುರಿಸಲಿದ್ದಾರೆ. ತಮ್ಮ ನಾಲ್ಕೂವರೆ ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ವಿಚಾರಣೆ ಎದುರಿಸುವಂತಾಗಿದೆ.
ಸಿದ್ದರಾಮಯ್ಯ ಅವರು ವಿಚಾರಣೆಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಕಚೇರಿ ಸುತ್ತಮುತ್ತ ನಗರ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ನಗರದ ಕೃಷ್ಣ ವಿಲಾಸ ರಸ್ತೆ ಮತ್ತು ದಿವಾನ್ಸ್ ರಸ್ತೆ ಜಂಕ್ಷನ್ ನಲ್ಲಿರುವ ಲೋಕಾಯುಕ್ತ ಕಚೇರಿ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಲೋಕಾಯುಕ್ತ ವಿಚಾರಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಆಪ್ತ ಸಚಿವರಾದ ಬೈರತಿ ಸುರೇಶ್, ಈಶ್ವರ್ ಖಂಡ್ರೆ ಜತೆ ಗೌಪ್ಯ ಸಭೆ ನಡೆಸಿದರು. ಸಭೆ ಬಳಿಕ ಬೆಂಗಳೂರಿಗೆ ವಾಪಸ್ ಆದರು.