Homeಕರ್ನಾಟಕವಿಜಯೇಂದ್ರ ಭಾಮೈದ ಸೇರಿ 13 ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ವಿಜಯೇಂದ್ರ ಭಾಮೈದ ಸೇರಿ 13 ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಮೈಸೂರು, ಬೀದರ್ ,ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ 63ಕ್ಕೂ ಹೆಚ್ಚಿನ ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು 13 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ ಕೋಟ್ಯಾಂತರ ಮೌಲ್ಯದ ಆಸ್ತಿ-ಪಾಸ್ತಿ ಜಪ್ತಿ ಮಾಡಿದ್ದಾರೆ.

ರಾಜ್ಯದ 63 ಕ್ಕೂ ಕಡೆಗಳಲ್ಲಿ ಮುಂಜಾನೆಯಿಂದ ಆದಾಯ ಮೀರಿ‌ ನೂರಾರು ಪಟ್ಟು ಅಕ್ರಮ ಆಸ್ತಿ ಪಾಸ್ತಿಗಳಿಸಿರುವ 13 ಅಧಿಕಾರಿಗಳ ಕಚೇರಿ ಮನೆಗಳು ಇನ್ನಿತರ ಆಸ್ತಿಗಳ ಮೇಲೆ ನಡೆಸಿರುವ  ದಾಳಿ ಮುಂದುವರೆದಿದೆ.

ಭ್ರಷ್ಟ ಅಧಿಕಾರಿಗಳ ಬಳಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದ್ದು ಅವುಗಳ ಪರಿಶೀಲನೆ ನಡೆಸಿ ದಾಖಲೆ ಪತ್ರಗಳ ತಪಾಸಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು  ತಿಳಿಸಿದ್ದಾರೆ.

ಬೆಂಗಳೂರಿನ 3 ಕಡೆ ದಾಳಿ

ನಗರದ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಬೆಸ್ಕಾಂ ಜಾಗೃತ ದಳ ಅಧಿಕಾರಿ ಟಿ.ಎನ್ .ಸುಧಾಕರ್ ರೆಡ್ಡಿ ಮನೆ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ
ಹೆಚ್.ಎಸ್.ಕೃಷ್ಣಮೂರ್ತಿ ಮನೆ ಕಚೇರಿಯ ಮೇಲೆ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ.

ಜಯನಗರದ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಚನ್ನಕೇಶವ ಅವರ ಜಕ್ಕೂರು ಸಮೀಪದ ಮನೆ ಮೇಲೆ‌ ದಾಳಿ ನಡೆಸಲಾಗಿದೆ. ಚನ್ನಕೇಶವರ ಅಮೃತ್ ಹಳ್ಳಿ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ 6 ಲಕ್ಷ ನಗದು. ಚಿನ್ನ 3 ಕೆಜಿ, 28 ಕೆ.ಜಿ ಬೆಳ್ಳಿ, 25 ಲಕ್ಷ ಮೌಲ್ಯದ ವಜ್ರಾಭರಣ ಹಾಗೂ 5 ಲಕ್ಷ ಮೌಲ್ಯದ 7 ಪುರಾತನ ವಸ್ತುಗಳು ದೊರೆತಿವೆ. ಪತ್ತೆಯಾದ ವಸ್ತುಗಳ ಮೌಲ್ಯ ಸುಮಾರು 1.5 ಕೋಟಿ ಎನ್ನಲಾಗಿದೆ.

ಜಯನಗರ ಡಿವಿಷನ್‌ಗೆ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ಚನ್ನಕೇಶವ ಅಪಾರ್ಟ್ಮೆಂಟ್ ಹಾಗೂ ಕಮರ್ಷಿಯಲ್ ಬಿಲ್ಡಿಂಗ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಲಕ್ಷ‌ಲಕ್ಷ ಲಂಚ ಪಡೆಯುತ್ತಿದ್ದರು ಎಂಬ ಆರೋಪವಿದೆ. 

ಹೆಚ್ಚು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಕಾರಣ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಚನ್ನಕೇಶವಗೆ ಸೇರಿದ ಏಳು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈತ ಐಷಾರಾಮಿ ಅಪಾರ್ಟ್ ಮೆಂಟ್  ನಲ್ಲಿ ವಾಸ ಮಾಡುತ್ತಿರುವುದು ಪತ್ತೆಯಾಗಿದೆ. ಕುಂಬಳಗೂಡು- ಕಣಿಮಿಣಿಕೆ ಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮನೆ ಮೇಲೂ ದಾಳಿ ಮಾಡಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನಲ್ಲಿ ದಾಳಿ

ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಅವರ ಕಚೇರಿ ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹೆಸರಿನಲ್ಲಿ ಎಂ ಎಸ್ ಗ್ರೂಪ್ ಕಂಪನಿ, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಐ ಜಿ ಪಿ, ಸುಬ್ರಮಣ್ಣೀಶ್ವರ ರಾವ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ.

ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಏಕಕಾಲಕ್ಕೆ ಲೋಕಯುಕ್ತ ದಾಳಿಯಾಗಿದೆ. ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ, ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಂದ್ರಶೇಖರ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆ ಮಾತ್ರ ಹೊಸಪೇಟೆಯಲ್ಲಿದೆ.

ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಗಂಗಾವತಿಯಲ್ಲಿ‌ ಕೆಲಸ ಮಾಡುತ್ತಿದ್ದು ಮನೆ ಕಂಪ್ಲಿಯಲ್ಲಿದೆ. ಹೀಗಾಗಿ ಚಂದ್ರಶೇಖರ ಅವರ ಹೊಸಪೇಟೆ ಮನೆ ಮತ್ತು ಮಾರುತಿ ಅವರ ಕಂಪ್ಲಿ ಮತ್ತು ಗಂಗಾವತಿ ನಿವಾಸದ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ಬೀದರ್ ನಲ್ಲಿ ದಾಳಿ

ಬೀದರ್‌ನಲ್ಲೂ ಸಹ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್‌ನ ಪಶು ವೈಧ್ಯಕೀಯ ವಿಶ್ವವಿದ್ಯಾಲಯದ ನೌಕರರ ಸುನೀಲ್ ಕುಮಾರ್ ಮನೆ ಹಾಗೂ ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಯಾದಗಿರಿ ಡಿಎಚ್‌ಓ ಆಗಿರುವ ಡಾ. ಪ್ರಭುಲಿಂಗ್ ಮಾನಕರ್‌ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದ ಮೇಲೆ, ಯಾದಗಿರಿ ನಗರದ ಬಾಡಿಗೆ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಅವರ ಮೇಲಿದೆ.

ಬಿ ವೈ ವಿಜಯೇಂದ್ರ ಭಾಮೈದನಿಗೆ ಶಾಕ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ನಿಯ ಸಹೋದರನ ಮನೆ‌ ಮೇಲೆ‌ ಲೋಕಾಯುಕ್ತ ದಾಳಿಯಾಗಿದೆ. ಡಾ ಪ್ರಭುಲಿಂಗ ಮಾನಕರ್ ಯಾದಗಿರಿ ಡಿಎಚ್ ಓ ಆಗಿರುವ ಡಾ ಪ್ರಭುಲಿಂಗ್ ಮಾನಕರ್‌ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದಲ್ಲಿ ಶೋಧ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments